LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

 ಅಗ್ನಿವೀರರು ಯುವಜನತೆಗೆ ಮಾದರಿ: ಶ್ರೀ ಆನಂದ ದೇವರು

ಜಮಖಂಡಿ, ಜೂ.19: ದೇಶ ಸೇವೆ ಎನ್ನುವುದು ಕೇವಲ ಉದ್ಯೋಗವಲ್ಲ, ಅದು ರಾಷ್ಟ್ರದ ಮೇಲಿನ ಬದ್ಧತೆ, ತ್ಯಾಗ ಮತ್ತು ಕರ್ತವ್ಯದ ಸಂಕೇತವಾಗಿದೆ. ಅಗ್ನಿವೀರರಾಗಿ ಆಯ್ಕೆಯಾದ ಯುವಕರು ತಮ್ಮ ಕುಟುಂಬ, ಗ್ರಾಮ, ಜಿಲ್ಲೆ ಹಾಗೂ ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದು, ಇತರ ಯುವಕರಿಗೂ ಮಾದರಿಯಾಗಿದ್ದಾರೆ ಎಂದು ಓಲೇ ಮಠದ ಶ್ರೀ ಆನಂದ ದೇವರು ಅಭಿಪ್ರಾಯ ಪಟ್ಟರು.
ನಗರದ ಪಂಚಮಸಾಲಿ ಕಲ್ಯಾಣ ಮಂಟಪದಲ್ಲಿ ಬಿ.ಜಿ. ಗ್ರೂಪ್ ಕೋಚಿಂಗ್ ಸೆಂಟರ್, ಕಡಪಟ್ಟಿ-ಜಮಖಂಡಿ ಇವರ ಆಶ್ರಯದಲ್ಲಿ 2025-26ನೇ ಸಾಲಿನ ಅಗ್ನಿವೀರ ಸೈನಿಕರಾಗಿ ಆಯ್ಕೆಯಾದ ವಿದ್ಯಾರ್ಥಿಗಳು ಹಾಗೂ ಅವರ ತಂದೆ-ತಾಯಿಯರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು ಮನುಷ್ಯನು ಎಷ್ಟೇ ದೊಡ್ಡ ಆಸ್ತಿ ಸಂಪಾದಿಸಿದರೂ ಅಥವಾ ಉನ್ನತ ಹುದ್ದೆ ಅಲಂಕರಿಸಿದರೂ ಶಾಶ್ವತವಾಗಿ ಉಳಿಯಲು ಸಾಧ್ಯವಿಲ್ಲ. ಆದರೆ ದೇಶ ಸೇವೆಯನ್ನು ನಿಸ್ವಾರ್ಥವಾಗಿ ಮಾಡುವವರು ಜನರ ಹೃದಯಗಳಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದು ಹೇಳಿದರು.
ದೇಶದ ಅಭಿವೃದ್ಧಿಗೆ ಯೋಧರು ಮತ್ತು ರೈತರು ಎರಡು ಪ್ರಮುಖ ಶಕ್ತಿಗಳಾಗಿದ್ದು, ದೇಶದ ಗಡಿಯನ್ನು ಕಾಯುವ ಸೈನಿಕರು ಹಾಗೂ ದೇಶಕ್ಕೆ ಅನ್ನ ನೀಡುವ ರೈತರ ಕೊಡುಗೆ ಅಪಾರವಾಗಿದೆ. ಭಾರತ ಮಾತೆಯ ಋಣ ತೀರಿಸಲು ದೇಶ ಸೇವೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಸಮಾಜ ಸೇವೆಯೂ ದೇಶ ಸೇವೆಯ ಭಾಗವೇ ಆಗಿದೆ ಎಂದು ತಿಳಿಸಿದರು.
ಎಂ.ಆರ್.ಎನ್. ನಿರಾಣಿ ಸಮೂಹ ಸಂಸ್ಥೆಗಳ ಕಾರ್ಯನಿರ್ವಾಹಕ ಅಧಿಕಾರಿ, ಉದ್ಯಮಿ ಸಂಗಮೇಶ ನಿರಾಣಿ ಮಾತನಾಡಿ, ಅಗ್ನಿವೀರ ಯೋಜನೆ ಕೇವಲ ಉದ್ಯೋಗ ಕಲ್ಪಿಸುವ ಯೋಜನೆಯಲ್ಲ; ಯುವಕರಲ್ಲಿ ದೇಶಭಕ್ತಿ, ಶಿಸ್ತು, ನಾಯಕತ್ವ ಮತ್ತು ಸೇವಾ ಮನೋಭಾವ ಬೆಳೆಸುವ ಮಹತ್ವಾಕಾಂಕ್ಷಿ ರಾಷ್ಟ್ರೀಯ ಕಾರ್ಯಕ್ರಮವಾಗಿದೆ ಎಂದರು.
17 ರಿಂದ 21 ವರ್ಷದ ಯುವಕರಿಗೆ ನಾಲ್ಕು ವರ್ಷಗಳ ಕಾಲ ವಿಶೇಷ ತರಬೇತಿ ನೀಡಿ ರಾಷ್ಟ್ರ ಸೇವೆಗೆ ಸಜ್ಜುಗೊಳಿಸಲಾಗುತ್ತಿದೆ. ಅಗ್ನಿವೀರರಾಗುವುದು ಹೆಮ್ಮೆಯ ವಿಷಯವಾಗಿದ್ದು, ತಮ್ಮ ಮಕ್ಕಳನ್ನು ದೇಶ ಸೇವೆಗೆ ಕಳುಹಿಸುತ್ತಿರುವ ಪೋಷಕರ ತ್ಯಾಗ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಯುವಕರಿಗೆ ಮಾರ್ಗದರ್ಶನ ನೀಡಿ ಸಾವಿರಾರು ಮಂದಿಯನ್ನು ಸೇನೆಗೆ ಸೇರಲು ಪ್ರೇರೇಪಿಸುತ್ತಿರುವ ಬಿ.ಜಿ. ಗ್ರೂಪ್ ಕೋಚಿಂಗ್ ಸೆಂಟರ್ ಸಂಸ್ಥಾಪಕ ಬಸವರಾಜ ಗದ್ಯಾಳ ಅವರ ಸೇವೆ ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿ ಜಮಖಂಡಿ ಹಾಗೂ ಬಾಗಲಕೋಟೆ ಜಿಲ್ಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಅಧಿಕಾರಿಗಳನ್ನು ದೇಶಕ್ಕೆ ನೀಡುವಂತಾಗಲಿ ಎಂದು ಹಾರೈಸಿದರು.
 ಡಿಎಸ್ಪಿ ಮಹಾಂತೇಶ ಇಟ್ಟಿ ಮಾತನಾಡಿ, ದೇಶ ಸೇವೆ ಎನ್ನುವುದು ರಾಷ್ಟ್ರದ ಮೇಲಿನ ಬದ್ಧತೆಯ ಪ್ರತೀಕವಾಗಿದೆ. ಅಗ್ನಿವೀರರಾಗಿ ಆಯ್ಕೆಯಾಗಿರುವ ಯುವಕರು ಕಠಿಣ ಪರಿಶ್ರಮ, ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ದೃಢತೆಯ ಮೂಲಕ ಈ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೇನೆಯಲ್ಲಿ ದೊರೆಯುವ ಶಿಸ್ತು, ನಾಯಕತ್ವ ಮತ್ತು ಜೀವನ ಮೌಲ್ಯಗಳನ್ನು ಮುಂದಿನ ಬದುಕಿನಲ್ಲಿಯೂ ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಜಿ. ಗ್ರೂಪ್ ಕೋಚಿಂಗ್ ಸೆಂಟರ್ ಅಧ್ಯಕ್ಷ ಬಸವರಾಜ ಗದ್ಯಾಳ ವಹಿಸಿದ್ದರು. ಇದೇ ವೇಳೆ ನೂತನವಾಗಿ ಅಗ್ನಿವೀರರಾಗಿ ಆಯ್ಕೆಯಾದ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಅವರ ತಂದೆ-ತಾಯಿಗಳು ಹಾಗೂ ನಿವೃತ್ತ ಯೋಧರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ನಿವೃತ್ತ ಡಿವೈಎಸ್ಪಿ ಪಿ.ಎನ್. ಪಾಟೀಲ, ಪ್ರಕಾಶಗೌಡ ಪಾಟೀಲ, ರಮೇಶ ಶಿರೋಳ, ಪ್ರಭು ಜನವಾಡ, ಬಸವರಾಜ ಇಟ್ಟಿ, ಬಸಪ್ಪ ಕೊನಪ್ಪನವರ, ಶ್ರೀಕಾಂತ ರಾಮದುರ್ಗ, ಗಂಗಯ್ಯ ಕಡಕೋಳ, ಶ್ರೀಶೈಲ ಗುಂಡಗಿ, ಈರಪ್ಪ ಬೆಳಗಲಿ, ಗುರು ಇಟ್ಟಿ, ಶಿವಕುಮಾರ್ ಚಿತ್ತಕೋಟಿ, ದುಂಡಪ್ಪ ಮಾಳಿ, ಮಲ್ಲಪ್ಪ ಇಟ್ಟಿ, ರಮೇಶ ಕಿಶೋರಿ, ರಾಚಯ್ಯ ಮುದ್ದಯಗೌಡ್ರು, ಶ್ರೀಕಾಂತ ನ್ಯಾಮಗೌಡ ಹಾಗೂ ಶ್ರೀಶೈಲ ದೇಸಾಯಿ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ