ಬಳ್ಳಾರಿ, ಜು. 31:: ಆಗಸ್ಟ್ 2ರಂದು ನಡೆಯಲಿರುವ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ (Civil PC) ನೇಮಕಾತಿಯ RPC ಹಾಗೂ KK ಪರೀಕ್ಷೆಗಳಿಗೆ ಅಭ್ಯರ್ಥಿಗಳಿಗೆ ಒಂದೇ ಪರೀಕ್ಷಾ ಕೇಂದ್ರವನ್ನು ನಿಗದಿಪಡಿಸಬೇಕು ಎಂದು ಉದ್ಯೋಗಕಾಂಕ್ಷಿಗಳ ಹೋರಾಟ ಸಮಿತಿ ಬಳ್ಳಾರಿ ಜಿಲ್ಲಾ ಸಮಿತಿಯು ಪರೀಕ್ಷಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದೆ.
ಮನವಿಯಲ್ಲಿ, ಸಾವಿರಾರು ಅಭ್ಯರ್ಥಿಗಳಿಗೆ ಬೆಳಿಗ್ಗೆ ಹಾಗೂ ಮಧ್ಯಾಹ್ನ ನಡೆಯುವ RPC ಮತ್ತು KK ಪರೀಕ್ಷೆಗಳಿಗೆ ಬೇರೆ ಬೇರೆ ನಗರಗಳು ಹಾಗೂ ದೂರದ ಪ್ರದೇಶಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಿರುವುದರಿಂದ ತೀವ್ರ ತೊಂದರೆ ಉಂಟಾಗಿದೆ ಎಂದು ತಿಳಿಸಲಾಗಿದೆ. ವಿಶೇಷವಾಗಿ ಬೆಂಗಳೂರಿನಂತಹ ದಟ್ಟ ಸಂಚಾರವಿರುವ ನಗರದಲ್ಲಿ ಒಂದು ಪರೀಕ್ಷಾ ಕೇಂದ್ರದಿಂದ ಮತ್ತೊಂದು ಕೇಂದ್ರಕ್ಕೆ ತಲುಪಲು ಎರಡು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ. ಪರೀಕ್ಷಾ ಪ್ರಾಧಿಕಾರವು ಅಭ್ಯರ್ಥಿಗಳು ಪರೀಕ್ಷೆಗೆ ಎರಡು ಗಂಟೆಗಳ ಮುಂಚಿತವಾಗಿ ಕೇಂದ್ರದಲ್ಲಿ ಹಾಜರಾಗಬೇಕು ಎಂದು ಸೂಚಿಸಿರುವ ಹಿನ್ನೆಲೆಯಲ್ಲಿ, ಎರಡು ವಿಭಿನ್ನ ಕೇಂದ್ರಗಳಿಗೆ ಸಮಯಕ್ಕೆ ಸರಿಯಾಗಿ ತಲುಪುವುದು ಅಸಾಧ್ಯವಾಗಿದೆ ಎಂದು ದೂರಲಾಗಿದೆ.
ಈ ವ್ಯವಸ್ಥೆಯಿಂದ ಅಭ್ಯರ್ಥಿಗಳಲ್ಲಿ ಆತಂಕ ಹಾಗೂ ಮಾನಸಿಕ ಒತ್ತಡ ಉಂಟಾಗಿದ್ದು, ಪರೀಕ್ಷೆಗೆ ಕೇವಲ ನಾಲ್ಕು ದಿನಗಳು ಮಾತ್ರ ಉಳಿದಿರುವುದರಿಂದ ಪರೀಕ್ಷಾ ಪ್ರಾಧಿಕಾರ (KEA) ಕೂಡಲೇ ಮಧ್ಯಪ್ರವೇಶಿಸಿ RPC ಹಾಗೂ KK ಎರಡೂ ಪರೀಕ್ಷೆಗಳನ್ನು ಒಂದೇ ಪರೀಕ್ಷಾ ಕೇಂದ್ರದಲ್ಲಿ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಎಐಡಿವೈಒ ಜಿಲ್ಲಾ ಸಮಿತಿಯು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್, ಅಭ್ಯರ್ಥಿಗಳಾದ ಶ್ವೇತಾ ಕೆ.ಎನ್., ಲೋಕೇಶ್ ಹಾಗೂ ಮೌನೇಶ್ ಉಪಸ್ಥಿತರಿದ್ದರು.