ಬಳ್ಳಾರ01: ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ವತಿಯಿಂದ ಸುದೀರ್ಘ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶುಕ್ರವಾರ ಸನ್ಮಾನಿಸಿ ಗೌರವಿಸಲಾಯಿತು.
ಸಾರ್ವಜನಿಕ ಸೇವೆಯಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿ, ಯಶಸ್ವಿಯಾಗಿ ಸೇವಾ ಅವಧಿಯನ್ನು ಪೂರೈಸಿದ ನಿವೃತ್ತ ನೌಕರರನ್ನು ಒಕ್ಕೂಟದ ಪದಾಧಿಕಾರಿಗಳು ಆತ್ಮೀಯವಾಗಿ ಬೀಳ್ಕೊಟ್ಟರು.
ಬಿ. ಶ್ರೀಕಂಠಸ್ವಾಮಿ ಅವರು, ಜಿಲ್ಲಾ ಯೋಜನಾ ನಿರ್ದೇಶಕರ ಕಚೇರಿಯ ಕಾರ್ಯಪಾಲಕ ಅಭಿಯಂತರರಾಗಿ (ಇಇ) ಬರೋಬ್ಬರಿ 33 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಅವರ ದಕ್ಷ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಅದೇರೀತಿಯಾಗಿ ಪುಷ್ಪಾವತಿ ಅವರು, ಜಿಲ್ಲಾ ಖಜಾನೆ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ (ಎಫ್‌ಡಿಎ) 22 ವರ್ಷಗಳ ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದು, ಅವರ ಸೇವೆಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಸರ್ಕಾರಿ ಸೇವೆಯಲ್ಲಿ ಸಾರ್ವಜನಿಕರ ಹಿತಕ್ಕಾಗಿ ದೀರ್ಘಕಾಲ ಶ್ರಮಿಸಿ, ಕಳಂಕವಿಲ್ಲದೆ ನಿವೃತ್ತಿ ಹೊಂದುವುದು ಹೆಮ್ಮೆಯ ವಿಷಯ. ನಿವೃತ್ತರಾದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮುಂದಿನ ಜೀವನ ಸುಖಕರ ಮತ್ತು ಆರೋಗ್ಯದಾಯಕವಾಗಿರಲಿ ಎಂದು ಒಕ್ಕೂಟದ ಪ್ರಮುಖರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ವಿವಿಧ ಪದಾಧಿಕಾರಿಗಳು, ಇಲಾಖೆಯ ಸಿಬ್ಬಂದಿ ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದು, ನಿವೃತ್ತರಿಗೆ ಹೂಮಾಲೆ ಹಾಕಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.