ಬಳ್ಳಾರಿ,ಜು.31
ಶಿಕ್ಷಣದ ಜೊತೆಗೆ ಮಕ್ಕಳಿಗೆ ನಮ್ಮ ಸಂಸ್ಕೃತಿ, ಕಲೆ ಹಾಗೂ ಪರಂಪರೆಯ ಬಗ್ಗೆ ಅರಿವು ಮೂಡಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಬೇಕು ಎಂದು ಹೆಚ್.ಎಸ್.ಜಿ. ವಿದ್ಯಾಮಂದಿರದ ಪ್ರಾಂಶುಪಾಲ ಕೊಟ್ರೇಶ್ ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ತೋರಣಗಲ್ಲಿನ ವಿದ್ಯಾನಗರದಲ್ಲಿರುವ ಜಿಂದಾಲ್ ವಿದ್ಯಾಮಂದಿರ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕೃತಿ ಉಳಿದರೆ ನಾಡು ಉಳಿಯುತ್ತದೆ. ನಮ್ಮ ದೇಶದ ಸಂಸ್ಕೃತಿಗೆ ಕಲೆ, ನೃತ್ಯ, ಜನಪದ ಸಾಹಿತ್ಯ ಅಪಾರ ಕೊಡುಗೆ ನೀಡಿವೆ. ಇಂತಹ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ಬಳ್ಳಾರಿ ಜಿಲ್ಲೆಯಲ್ಲಿ ಅನೇಕ ಪ್ರತಿಭಾವಂತ ಕಲಾವಿದರಿದ್ದು, ಅವರಿಗೆ ಸೂಕ್ತ ವೇದಿಕೆ ಹಾಗೂ ಅವಕಾಶಗಳನ್ನು ಕಲ್ಪಿಸುವ ಅಗತ್ಯವಿದೆ. ಶಾಲಾ ಹಂತದಲ್ಲೇ ಮಕ್ಕಳಲ್ಲಿ ಸಂಸ್ಕೃತಿ ಹಾಗೂ ಕಲೆಯ ಬಗ್ಗೆ ಆಸಕ್ತಿ ಮೂಡಿಸಿದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಜಿಂದಾಲ್ ವಿದ್ಯಾಮಂದಿರದ ಪ್ರಾಂಶುಪಾಲ ಕೆ.ವಿ. ಶ್ರೀನಿವಾಸನ್ ಅವರು ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಜಿಲ್ಲೆಯ ಕಲಾವಿದರ ಪ್ರತಿಭೆಗೆ ಉತ್ತೇಜನ ನೀಡುವ ಕೆಲಸವನ್ನು ಮುಂದುವರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ಕವೀಂದ್ರ ಜೆ. ಅವರಿಂದ ತಬಲಾ ಸೋಲೊ, ಓ.ಎಂ. ವರ್ಷಿಣಿ ಅವರಿಂದ ಸುಗಮ ಸಂಗೀತ, ಬಳ್ಳಾರಿ ಕಲಾಂಜಲಿ ಕಲಾ ಟ್ರಸ್ಟ್ನ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ, ಪ್ರಿಯಾಂಕಾ ಎಂ. ಜೋಶಿ ಅವರಿಂದ ಜಾನಪದ ಗೀತೆಗಳು, ಕು. ಸುಮಲತಾ ಅವರಿಂದ ಏಕಪಾತ್ರಾಭಿನಯ ಹಾಗೂ ಕು. ಡಿ. ಕೃಷ್ಣಮೂರ್ತಿ ಮತ್ತು ತಂಡದಿAದ ‘ವಿದ್ಯೆ ತಂದ ಸಂಪತ್ತು’ ನಾಟಕ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಜಿಂದಾಲ್ ವಿದ್ಯಾಮಂದಿರದ ಉಪ ಪ್ರಾಂಶುಪಾಲ ಅಂಬಲಿ ನಾಯರ್, ಜಿಂದಾಲ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಕುಮಾರಸ್ವಾಮಿ, ಸಂಗೀತ ಗಾಯಕ ಕೊಟ್ರೇಶ್, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.