ಬಳ್ಳಾರಿ, ಜು.21:: ಜಿಲ್ಲೆಯ ಚಾಗನೂರು ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಹಸಿರು ಇಂಧನ ಉತ್ಪಾದನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಜಿ.ಬಿ.ಆರ್ ಇಕೋ ಪ್ರಾಜೆಕ್ಟ್ಸ್ ಹಾಗೂ ನಿತ್ಯಾ ಬಯೋ ಸಿಎನ್‌ಜಿ ಸಂಸ್ಥೆಗಳು ಜಂಟಿಯಾಗಿ ಅತ್ಯಾಧುನಿಕ ಬಯೋ ಸಿಎನ್‌ಜಿ (ಜೈವಿಕ ಅನಿಲ) ಉತ್ಪಾದನಾ ಘಟಕವನ್ನು ಸ್ಥಾಪಿಸಿವೆ.
ನಗರದಲ್ಲಿ ಶುಕ್ರವಾರ ಸಂಜೆ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರು ಯೋಜನೆಯ ವಿವರಗಳನ್ನು ಹಂಚಿಕೊಂಡರು. ಕೇಂದ್ರ ಸರ್ಕಾರದ 'ಸತತ್' ಯೋಜನೆಗೂ ಮುನ್ನವೇ ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ಪ್ರೋತ್ಸಾಹದೊಂದಿಗೆ ಈ ಹಸಿರು ಇಂಧನ ಯೋಜನೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಯೋಜನೆಯಡಿ ಜೈವಿಕ ಇಂಧನ ಉತ್ಪಾದನೆಗೆ ಅಗತ್ಯವಾದ ಫೀಡ್‌ಸ್ಟಾಕ್ ಬೆಳೆಸುವ 250ರಿಂದ 300 ರೈತರಿಗೆ ನೇರ ಮಾರುಕಟ್ಟೆ ದೊರೆಯಲಿದ್ದು, ರೈತರ ಆದಾಯ ಹೆಚ್ಚಳಕ್ಕೆ ನೆರವಾಗಲಿದೆ ಎಂದು ಹೇಳಿದರು.
ಘಟಕದಲ್ಲಿ ಉತ್ಪಾದನೆಯಾಗುವ ಜೈವಿಕ ಗೊಬ್ಬರ ಹಾಗೂ ಹುದುಗಿಸಿದ ಸಾವಯವ ಗೊಬ್ಬರ (ಎಫ್‌ಒಎಂ) ಮೂಲಕ ಜಿಲ್ಲೆಯ ಸುಮಾರು 5,000 ಎಕರೆ ಕೃಷಿ ಭೂಮಿಗೆ ರಾಸಾಯನಿಕ ಮುಕ್ತ ಪೋಷಣೆ ಒದಗಲಿದೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುವ ಜೊತೆಗೆ ಸಾವಯವ ಕೃಷಿಗೆ ಉತ್ತೇಜನ ಸಿಗಲಿದೆ ಎಂದು ವಿವರಿಸಿದರು.
ಘಟಕದಿಂದ ಸುಮಾರು 500 ಮಂದಿಗೆ ನೇರ ಉದ್ಯೋಗ ದೊರೆಯಲಿದ್ದು, ಸಾರಿಗೆ ಹಾಗೂ ಕೃಷಿ ವಲಯಗಳಲ್ಲಿ ಮತ್ತಷ್ಟು 100ರಿಂದ 150 ಮಂದಿಗೆ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.
ಘಟಕದಲ್ಲಿ ಉತ್ಪಾದನೆಯಾಗುವ ಜೈವಿಕ ಅನಿಲದ ವಿತರಣೆ ಹಾಗೂ ಮಾರಾಟಕ್ಕಾಗಿ ಬಿಪಿಸಿಎಲ್ ಮತ್ತು ಗೇಲ್ ಸಂಸ್ಥೆಗಳೊಂದಿಗೆ ತ್ರಿಪಕ್ಷೀಯ ಮಾರಾಟ ಒಪ್ಪಂದ ಮಾಡಿಕೊಳ್ಳಲಾಗಿದೆ. ಕೈಗಾರಿಕಾ ವಲಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ 'ಮಿನೇರಾ' ಸಂಸ್ಥೆಯೊಂದಿಗೂ ಕೈಗಾರಿಕಾ ಇಂಧನ ಪೂರೈಕೆಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಬಿ.ಆರ್ ಇಕೋ ಪ್ರಾಜೆಕ್ಟ್ಸ್‌ನ ಜಿ. ವೆಂಕಟರಮಣ, ಗಾರಪಾಟಿ ಪಿ.ವಿ. ರೆಡ್ಡಿ, ಭರತ್ ಸಾಯಿ, ಸುಬ್ಬರಾವ್, ಶೇಷ ರೆಡ್ಡಿ, ನಿತ್ಯಾ ಬಯೋ ಸಿಎನ್‌ಜಿಯ ಎಲ್. ನಾಗರಾಜ್, ಎಲ್. ವಿಶಾಲ್, ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು, ಬಿಪಿಸಿಎಲ್ ಟೆರಿಟರಿ ಮ್ಯಾನೇಜರ್ ಕಪಿಲ್, ಕೆನರಾ ಬ್ಯಾಂಕ್ ಎಜಿಎಂ ಅರುಣ್, ಚಾಗನೂರಿನ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರುಣ್ ಹಾಗೂ ಶಿವಕುಮಾರ್ ವೈ. ಹಳೆಕೋಟೆ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.