LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ವೈದ್ಯರು ರೋಗಿಗಳನ್ನು ದೇವರಂತೆ ಕಾಣಬೇಕು: ಡಾ. ಜಿ.ಎಸ್. ಗಲಗಲಿ 

 

ಜಮಖಂಡಿ, ಜು. 06 :  ರೋಗಿಗಳು ವೈದ್ಯರನ್ನು ದೇವರಂತೆ ನಂಬಿ ತಮ್ಮ ಜೀವವನ್ನು ಅವರ ಕೈಗೆ ಒಪ್ಪಿಸುತ್ತಾರೆ. ಅದೇ ರೀತಿಯಲ್ಲಿ ವೈದ್ಯರೂ ರೋಗಿಗಳನ್ನು ದೇವರಂತೆ ಪರಿಗಣಿಸಿ, ಸೇವಾಭಾವದಿಂದ ಚಿಕಿತ್ಸೆ ನೀಡಿದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಜಿ.ಎಸ್. ಗಲಗಲಿ ಹೇಳಿದರು. 

ನಗರದ ಬಸವ ಭವನದಲ್ಲಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಜಮಖಂಡಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಪ್ರಸ್ತುತ ವೈದ್ಯರ ಮೇಲೆ ರೋಗಿಗಳ ಸಂಖ್ಯೆ ಹಾಗೂ ಆಡಳಿತಾತ್ಮಕ ಜವಾಬ್ದಾರಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲಸದ ಒತ್ತಡವೂ ಹೆಚ್ಚಾಗಿದೆ. ಅನೇಕ ವೈದ್ಯರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಿದ್ದಾರೆ. ಸಮಾಜದ ಆರೋಗ್ಯವನ್ನು ಕಾಪಾಡುವ ವೈದ್ಯರು ಮೊದಲು ತಮ್ಮದೇ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿದ್ದಾಗ ಮಾತ್ರ ಉತ್ತಮ ವೈದ್ಯಕೀಯ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಹಶೀಲ್ದಾರ್ ಅನಿಲ ಬಡಿಗೇರ ಮಾತನಾಡಿ, ಸಮಾಜದಲ್ಲಿ ಅನೇಕ ವೃತ್ತಿಗಳಿದ್ದರೂ ವೈದ್ಯ ವೃತ್ತಿಗೆ ಮಾತ್ರ ದೇವರ ಸ್ಥಾನಮಾನ ನೀಡಲಾಗಿದೆ. ಸಂಕಷ್ಟದ ಸಮಯದಲ್ಲಿ ಜನರ ಜೀವ ಉಳಿಸುವ ಜವಾಬ್ದಾರಿ ವೈದ್ಯರ ಮೇಲಿದೆ. ಆದ್ದರಿಂದ ವೈದ್ಯರು ತಮ್ಮ ಸೇವಾ ಮನೋಭಾವವನ್ನು ಸದಾ ಉಳಿಸಿಕೊಂಡು ಸಮಾಜದ ವಿಶ್ವಾಸಕ್ಕೆ ಪಾತ್ರರಾಗಬೇಕು ಎಂದು ಹೇಳಿದರು. 

ಐಎಂಎ ಜಮಖಂಡಿ ತಾಲೂಕು ಅಧ್ಯಕ್ಷ ಡಾ. ಎಚ್.ಜಿ. ದಡ್ಡಿ ಮಾತನಾಡಿ, ಇಂದಿನ ಸಮಾಜದಲ್ಲಿ ಕುಟುಂಬ ವ್ಯವಸ್ಥೆ, ಸಾಮಾಜಿಕ ಮೌಲ್ಯಗಳು ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿವೆ. ಇದಕ್ಕೆ ಜೊತೆಗೆ ಆಹಾರ, ನೀರು ಹಾಗೂ ಗಾಳಿಯ ಮಾಲಿನ್ಯದಿಂದ ಅನೇಕ ಹೊಸ ಕಾಯಿಲೆಗಳು ವ್ಯಾಪಕವಾಗಿ ಹರಡುತ್ತಿವೆ. ಇಂತಹ ಸಂದರ್ಭದಲ್ಲಿ ವೈದ್ಯರು ಕೇವಲ ಚಿಕಿತ್ಸೆ ನೀಡುವುದಷ್ಟೇ ಅಲ್ಲದೆ, ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕು ಎಂದು ತಿಳಿಸಿದರು. 

ವೈದ್ಯರ ಬದುಕು ಬಿಡುವಿಲ್ಲದ ಸೇವೆಯಾಗಿದೆ. ನಿರಂತರ ಒತ್ತಡದಿಂದ ವೈದ್ಯರಲ್ಲಿಯೇ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚುತ್ತಿದೆ. ಆದ್ದರಿಂದ ಪ್ರತಿಯೊಬ್ಬ ವೈದ್ಯರೂ ತಮ್ಮ ಆರೋಗ್ಯದ ಮೇಲೂ ಸಮಾನ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು. 

ಸಾನ್ನಿಧ್ಯ ವಹಿಸಿದ್ದ ಓಲೆಮಠದ ಶ್ರೀ ಆನಂದ ದೇವರು ಆಶೀರ್ವಚನ ನೀಡಿ, ಆರೋಗ್ಯವೇ ಮನುಷ್ಯನ ನಿಜವಾದ ಸಂಪತ್ತು. ಹಣ ಸಂಪಾದಿಸುವ ಭರದಲ್ಲಿ ಆರೋಗ್ಯವನ್ನು ಕಡೆಗಣಿಸಬಾರದು. ಇಂದಿನ ಯುವ ಪೀಳಿಗೆ ವ್ಯಸನಗಳತ್ತ ಆಕರ್ಷಿತರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸಬೇಕು ಎಂದು ಕರೆ ನೀಡಿದರು. 

ಕೊರೊನಾ ಮಹಾಮಾರಿ ಸಂದರ್ಭದಲ್ಲಿ ವೈದ್ಯರು ತಮ್ಮ ಜೀವದ ಹಂಗು ತೊರೆದು ಸಾವಿರಾರು ಜನರ ಜೀವ ಉಳಿಸಿದ ಸೇವೆಯನ್ನು ಸಮಾಜ ಎಂದಿಗೂ ಮರೆಯಬಾರದು. ಕೈಕಾಲುಗಳಲ್ಲಿ ಶಕ್ತಿ ಹಾಗೂ ಉತ್ತಮ ಆರೋಗ್ಯ ಹೊಂದಿರುವವನೇ ನಿಜವಾದ ಶ್ರೀಮಂತ ಎಂಬ ಸಂದೇಶವನ್ನು ಅವರು ನೀಡಿದರು. 

ಕಾರ್ಯಕ್ರಮವು ಡಾ. ವಿಜಯಲಕ್ಷ್ಮಿ ತುಂಗಳ ಹಾಗೂ ಡಾ. ಗೌತಮಿ ಕಡ್ಲೆವಾಡ ಅವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಡಾ. ವಿ.ಎಸ್. ಜಟ್ಟಿ ಸ್ವಾಗತಿಸಿದರು. ವೇದಿಕೆಯಲ್ಲಿ ಐಎಂಎ ಪದಾಧಿಕಾರಿಗಳಾದ ಡಾ. ವಿ.ಎಸ್. ಬಿರಾದಾರ್, ಡಾ. ಮಹೇಶ್ ಪಾಟೀಲ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಶಿವಲೀಲಾ ಮತ್ತು ಡಾ. ಸಂಗಮೇಶ್ ನ್ಯಾಮಗೌಡ ದಂಪತಿ ಹಾಗೂ ಡಾ. ಎಸ್.ಆರ್. ಪಣಕ್ ಅವರ ಪತಿ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. 

ಕಾರ್ಯಕ್ರಮದಲ್ಲಿ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಸಾರ್ವಜನಿಕರು ಹಾಗೂ ಐಎಂಎ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 

ಕಾರ್ಯಕ್ರಮವನ್ನು ಡಾ. ಶ್ರೀಮತಿ ಪೂಜಾರಿ ನಿರೂಪಿಸಿದರು. ಕೊನೆಯಲ್ಲಿ ಡಾ. ಮಹೇಶ್ ಪಾಟೀಲ ವಂದಿಸಿದರು. 

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಕ್ತರ ಸಾಮಾಜಿಕ ಸೇವೆ ಮತ್ತಷ್ಟು ಪ್ರೇರಣೆ-ಹುಮ್ಮಸ್ಸು ನೀಡಿದೆ : ಮಲ್ಲಿಕಾರ್ಜುನ ಶ್ರೀಸಂಚಾರ ಸುಗಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಾಕೀತು ಭ್ರಷ್ಟಾಚಾರ ಎಸಗಿದ ಸಚಿವರನ್ನು ಕೈಬಿಡಲು ಆಗ್ರಹಿಸಿ  ಬಿಜೆಪಿವತಿಯಿಂದ ಪ್ರತಿಭಟನೆ ಶಾಶ್ವತ ಪುನರ್ವಸತಿ ಹಾಗೂ ಕಾನೂನುಬದ್ಧ ಎಲ್ಲಾ ಹಕ್ಕು-ಸೌಲಭ್ಯಗಳಿಗಾಗಿ ಮೊಳವಾಡ ಗ್ರಾಮಸ್ಥರ ಮನವಿಕೃಷ್ಣಾ ಮೇಲ್ದಂಡೆ ನಿರಾಶ್ರಿತರಿಗೆ KAS ನೇಮಕಾತಿಯಲ್ಲಿ ಮೀಸಲಾತಿ ನಿರಾಕರಣೆ - ಸರ್ಕಾರದ ವಿರುದ್ಧ ಕಿಸಾನ ಸಂಘ ಆಕ್ರೋಶಬಳ್ಳಾರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು: ಬಿಜೆಪಿ ರೈತ ಮೋರ್ಚಾ ಅಹೋರಾತ್ರಿ ಧರಣಿಆಗಸ್ಟ್‌ 10ರೊಳಗೆ ಎಲ್ಲ ಕಾಲುವೆಗಳಿಗೆ ನೀರು ಹರಿಸಿ: ತುಂಗಭದ್ರಾ ರೈತ ಸಂಘದ ಆಗ್ರಹವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹ: 200 ಆಟೋಗಳೊಂದಿಗೆ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತ