ಬಳ್ಳಾರಿ, ಜು. 28: ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಬಳ್ಳಾರಿ ಜಿಲ್ಲಾ ಪೊಲೀಸ್ ವತಿಯಿಂದ ಕಂಪ್ಲಿ ಪಟ್ಟಣದ ಕಮ್ಮಾ ಭವನದಲ್ಲಿ ಸೋಮವಾರ "RISE – ಬೇಡ Bro" ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ವ್ಯಸನದಿಂದ ದೂರವಿರುವಂತೆ ಅರಿವು ಮೂಡಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರು ಮಾತನಾಡಿ, ಯುವಜನರು ಮಾದಕ ವ್ಯಸನದ ಆಮಿಷಕ್ಕೆ ಒಳಗಾಗದೆ ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಡಿಎಸ್ಪಿ ಪ್ರಸಾದ್ ಗೋಖಲೆ, ಕಂಪ್ಲಿಯ ಹಿರಿಯ ವೈದ್ಯಾಧಿಕಾರಿ ಡಾ. ರವೀಂದ್ರ ಕನಕಗಿರಿ, ಶಿಕ್ಷಣ ಸಂಯೋಜಕ ಬಸವರಾಜ್, ಉಪನ್ಯಾಸಕ ಸಿದ್ದೇಶ್, ಕಂಪ್ಲಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವಾಸು ಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಹಗರಿಬೊಮ್ಮನಹಳ್ಳಿಯ ಮಹಾಂತೇಶ್ ಅವರ ನಾಟಕ ತಂಡವು ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳನ್ನು ನಾಟಕದ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸಿತು.
ಕಂಪ್ಲಿ ಪಟ್ಟಣದ ಪಿಯು ಹಾಗೂ ಪದವಿ ಕಾಲೇಜುಗಳ ಸುಮಾರು 1,300 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.