LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಅಗತ್ಯವಿರುವಷ್ಟು ಯೂರಿಯಾ ಪೂರೈಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ

ಬಳ್ಳಾರಿ: 05:.ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಅಗತ್ಯವಿರುವಷ್ಟು ಯೂರಿಯಾ, ಡಿಎಪಿ ಸೇರಿದಂತೆ ಎಲ್ಲಾ ರಸಗೊಬ್ಬರಗಳು ಹಾಗೂ ಗುಣಮಟ್ಟದ ಬೀಜಗಳನ್ನು ಯಾವುದೇ ನಿರ್ಬಂಧವಿಲ್ಲದೆ ಸಮರ್ಪಕವಾಗಿ ಪೂರೈಸಬೇಕು ಎಂದು ಆಗ್ರಹಿಸಿ ಎಐಕೆಕೆಎಂಎಸ್ (ಅಖಿಲ ಭಾರತ ಕಿಸಾನ್ ಕೃಷಿ ಮಜ್ದೂರ್ ಸಂಘ) ಸಂಘಟನೆಯ ನೇತೃತ್ವದಲ್ಲಿ ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಬಳಿಕ ಅಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಿದ ರೈತ ಮುಖಂಡರು, ಮುಂಗಾರು ಆರಂಭವಾಗುತ್ತಿದ್ದಂತೆ ರೈತರು ಭೂಮಿ ಹದಗೊಳಿಸುವುದು, ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುವುದು, ಬೀಜ ಹಾಗೂ ರಸಗೊಬ್ಬರ ಸಂಗ್ರಹಿಸಿಕೊಳ್ಳುವುದು ಸೇರಿದಂತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರವು ಕೃಷಿ ಒಳಸುರಿವುಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ ವರ್ಷದಂತೆ ಈ ಬಾರಿಯೂ ರೈತರು ಬೀಜ ಮತ್ತು ರಸಗೊಬ್ಬರಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ರೈತ ಸಂಪರ್ಕ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತರೂ ಅಗತ್ಯ ಪ್ರಮಾಣದ ಗೊಬ್ಬರ ದೊರೆಯುತ್ತಿಲ್ಲ. ಬೀಜ ಮತ್ತು ಗೊಬ್ಬರ ದೊರೆಯದಿದ್ದರೆ ಬೆಳೆ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಉಂಟಾಗಲಿದ್ದು, ರೈತರ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕೆಲವೆಡೆ ಮಹಿಳಾ ರೈತರು ಸಹ ರೈತ ಸಂಪರ್ಕ ಕೇಂದ್ರಗಳ ಬಳಿ ರಾತ್ರಿ ತಂಗಿ ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರು, ನೆರಳು ಸೇರಿದಂತೆ ಮೂಲ ಸೌಲಭ್ಯಗಳಿಲ್ಲದಿದ್ದರೂ ಗೊಬ್ಬರ ದೊರೆಯಬಹುದೆಂಬ ನಿರೀಕ್ಷೆಯಲ್ಲಿ ರೈತರು ಕಾಯುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ದೇಶದ ಆಹಾರ ಭದ್ರತೆಯನ್ನು ಕಾಪಾಡುವ ರೈತ ಸಮುದಾಯ ಇಂತಹ ಸಂಕಷ್ಟ ಅನುಭವಿಸುವುದು ಸರ್ಕಾರಗಳ ವೈಫಲ್ಯವನ್ನು ತೋರಿಸುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಯೂರಿಯಾ ಮತ್ತು ಡಿಎಪಿ ಗೊಬ್ಬರ ಕೊರತೆಗೆ ಜಾಗತಿಕ ಯುದ್ಧ ಪರಿಸ್ಥಿತಿಯನ್ನು ಕಾರಣವಾಗಿ ಉಲ್ಲೇಖಿಸುವುದು ಜವಾಬ್ದಾರಿಯುತ ಆಡಳಿತದ ಲಕ್ಷಣವಲ್ಲ. ಮುಂಗಡ ಯೋಜನೆ ರೂಪಿಸಿ ಅಗತ್ಯ ಕಚ್ಚಾ ವಸ್ತುಗಳನ್ನು ಪರ್ಯಾಯ ಮೂಲಗಳಿಂದ ಸಂಗ್ರಹಿಸಿ ರಸಗೊಬ್ಬರ ಉತ್ಪಾದನೆ ಮತ್ತು ಪೂರೈಕೆಯನ್ನು ಖಚಿತಪಡಿಸಬೇಕಾಗಿತ್ತು. ಅದನ್ನು ಬಿಟ್ಟು ಕಡಿಮೆ ಗೊಬ್ಬರ ಬಳಸಿ, ಪರ್ಯಾಯ ಗೊಬ್ಬರ ಬಳಸಿ ಅಥವಾ ನ್ಯಾನೋ ಯೂರಿಯಾ ಬಳಸಿ ಎಂಬ ಸಲಹೆ ನೀಡುವುದು ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ ಎಂದು ರೈತರು ಅಭಿಪ್ರಾಯಪಟ್ಟರು.
ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸುವುದು, ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಹಾಗೂ ಕೃಷಿಯೇತರ ಉದ್ದೇಶಗಳಿಗೆ ಯೂರಿಯಾ ಮಾರಾಟ ಮಾಡುವಂತಹ ಅಕ್ರಮ ಚಟುವಟಿಕೆಗಳನ್ನು ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅಗತ್ಯವಿಲ್ಲದ ಜಿಂಕ್ ಅಥವಾ ಇತರೆ ಉತ್ಪನ್ನಗಳನ್ನು ಯೂರಿಯಾ ಜೊತೆ ಕಡ್ಡಾಯವಾಗಿ ಖರೀದಿಸುವಂತೆ ಒತ್ತಾಯಿಸುವ ಕ್ರಮಗಳಿಗೂ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ರೈತರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿತು.
ಪ್ರತಿಭಟನೆಯಲ್ಲಿ ಎಐಕೆಕೆಎಂಎಸ್ ಜಿಲ್ಲಾ ಅಧ್ಯಕ್ಷ ಗೋವಿಂದ್, ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ್, ಜಂಟಿ ಕಾರ್ಯದರ್ಶಿ ಕಾಸಿಂ ಸಾಬ್, ಕುರುಗೋಡು ತಾಲ್ಲೂಕು ಅಧ್ಯಕ್ಷ ಲಿಂಗಪ್ಪ ಸೇರಿದಂತೆ ರೈತರಾದ ಚೆನ್ನಪ್ಪ, ಹನುಮಂತ, ಪೋತಯ್ಯ, ಸಂಜೀವಪ್ಪ, ಹೊನ್ನುರಸ್ವಾಮಿ ಮತ್ತು ಇತರರು ಭಾಗವಹಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್