ಬಳ್ಳಾರಿ, 01:: ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ನೀಡಿರುವುದಾಗಿ ಆರೋಪಿಸಲಾದ ಪ್ರಚೋದನಕಾರಿ ಮತ್ತು ದ್ವೇಷಪೂರಿತ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಜಿಲ್ಲಾ ಪ್ರಚಾರ ಕಾಂಗ್ರೆಸ್ ಸಮಿತಿಯಿಂದ ಬಳ್ಳಾರಿಯ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್ ದಾಖಲಿಸಲಾಗಿದೆ.
ಕೆಪಿಸಿಸಿ ಪ್ರಚಾರ ಸಮಿತಿಯ ನಿರ್ದೇಶನದ ಮೇರೆಗೆ ಸಲ್ಲಿಸಲಾದ ದೂರಿನಲ್ಲಿ, ಜುಲೈ 28ರಂದು ಉಡುಪಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಶಾಸಕ ಯಶಪಾಲ್ ಸುವರ್ಣ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ದ್ವೇಷವನ್ನು ಪ್ರಚೋದಿಸುವ ರೀತಿಯ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರನ್ನು ರಾಷ್ಟ್ರದ್ರೋಹಿ ಎಂದು ಘೋಷಣೆ ಕೂಗಿರುವುದನ್ನೂ ಕಾಂಗ್ರೆಸ್ ಖಂಡಿಸಿದ್ದು, ಇಂತಹ ಹೇಳಿಕೆಗಳು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟವರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಈ ಕುರಿತು ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಲ್ಲಂ ಪ್ರಶಾಂತ್ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.