ತಾಳಿಕೋಟೆ,ಜು,೨೦ : ತಾಳಿಕೋಟೆಯ ಶ್ರೀ ಗ್ರಾಮದೇವಿ ಜಾತ್ರಾಮಹೋತ್ಸವ ಅಂಗವಾಗಿ ೨.೩ ದಿನಗಳ ಕಾಲ ರಾಜವಾಡೆಯಲ್ಲಿ ಏರ್ಪಡಿಸಲಾದ ಗೀಗೀ ಪದಗಳು ವಿವಿಧ ರೀತಿಯ ಕಥೆಗಳನ್ನು ಪದಗಳಿಂದ ಹಾಡುವ ಮೂಲಕ ಅರ್ಥೈಯಿಸುವದರೊಂದಿಗೆ ಹಾಡಿಕೆಯ ಗೀಗೀ ಪದಗಳು ಅರ್ಥಪೂರ್ಣವಾಗಿ ಜನಮನ ಸೆಳೆದವು.
ಈ ಗೀಗೀ ಪದಗಳ ಹಾಡಿಕೆಯ ತಂಡ ಬೆಳಗಾಂವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಣದಾಳದ ಮುಖ್ಯ ಗಾಯಕ ಲಕ್ಷ್ಮಣ ಕಣದಾಳ ಹಾಗೂ ಇನ್ನೊಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಗೋಲಬಾವಿ ಗ್ರಾಮದ ಮುಖ್ಯ ಗಾಯಕಿ ಶ್ರೀಮತಿ ರೇಖಾ ಗೋಲಭಾವಿ ಅವರ ಈ ಎರಡೂ ತಂಡಗಳ ನಡುವೆ ನಡೆದ ಸೆಣಸಾಟದ ಗೀಗೀ ಪದಗಳಲ್ಲಿ ಗಂಡು ಹೆಚ್ಚೋ ಹೆಣ್ಣು ಹೆಚ್ಚೋ ಹಾಗೂ ಭಕ್ತಿ ಚರಿತ್ರೆಯ ಹಾಡುಗಳನ್ನು ಹಾಡುವದರೊಂದಿಗೆ ಕೇಳುಗರ ಹಾಗೂ ನೋಡುಗರ ಜನಮನ ಸೆಳೆದವಲ್ಲದೇ ಗ್ರಾಮೀಣ ಭಾಗದ ಜನಪದ ಕಲೆಗಳಲ್ಲಿ ಒಂದಾದ ಗೀ ಗೀ ಪದಗಳು ಇಂದಿಗೂ ತನ್ನದೇ ಆದ ಆಕರ್ಷಣೆಯನ್ನು ಉಳಿಸಿಕೊಂಡಿದ್ದು, ಜಾತ್ರೆಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದಂತಾಯಿತು.
ಜಾತ್ರಾ ಮಹೋತ್ಸವಗಳಲ್ಲಿ ಇಂತಹ ಸಾಂಪ್ರದಾಯಿಕ ಕಲೆಗಳಿಗೆ ವೇದಿಕೆ ಕಲ್ಪಿಸಿಕೊಡುವುದರಿಂದ ನಮ್ಮ ನಶಿಸಿಹೋಗುತ್ತಿರುವ ಜನಪದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿದಂತಾಗುತ್ತದೆ.
ಗ್ರಾಮದೇವತೆಯ ಕೃಪೆಯಿಂದ ಇಡೀ ಸಮಾಜದಲ್ಲಿ ಸುಖ, ಶಾಂತಿ ನೆಲೆಸಲಿ ಎಂಬ ಆಶಯದೊಂದಿಗೆ ಜಾತ್ರೆಯ ಈ ದಿನದ ಈ ಗೀಗೀ ಪದದ ಸಾಂಸ್ಕೃತಿಕ ಸಂಭ್ರಮ ಯಶಸ್ವಿಯಾಗಿ ಇಂದು ಜರುಗಿತು.