ಬಳ್ಳಾರಿ,ಜು.21:: ನಗರದ ಡಾಕ್ಟರ್ ರಾಜಕುಮಾರ್ ರಸ್ತೆಯಲ್ಲಿರುವ ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಸರ್ಕಾರದ ಸುಪರ್ದಿಗೆ ಒಳಪಟ್ಟು 50 Another ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಸಂಸ್ಥೆಯ ‘ಸುವರ್ಣ ಸಂಭ್ರಮ' ಕಾರ್ಯಕ್ರಮವನ್ನು ಕಾರ್ಯಕ್ರಮವನ್ನು ಇದೇ ಜುಲೈ 23 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ರಾಜಶೇಖರ್ ಗಾಣಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜುಲೈ 23ರಂದು
ಬೆಳಿಗ್ಗೆ 10 ಗಂಟೆಗೆ ಅದ್ದೂರಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ 1947ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಕಳೆದ ಎಂಟು ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಯುರ್ವೇದ ಶಿಕ್ಷಣ ನೀಡಿ, ಲಕ್ಷಾಂತರ ರೋಗಿಗಳಿಗೆ ಚಿಕಿತ್ಸೆ ಒದಗಿಸಿದೆ. ಸಂಸ್ಥೆಯ ಈ ಅಮೂಲ್ಯ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು ಜುಲೈ 23, 1976ರಂದು ಇದನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಅಂದಿನಿAದ ಕಲ್ಯಾಣ ಕರ್ನಾಟಕ ಭಾಗ ಮಾತ್ರವಲ್ಲದೆ, ನೆರೆಯ ಆಂಧ್ರಪ್ರದೇಶದ ಜನತೆಗೂ ಇದು ಪ್ರಮುಖ ಆರೋಗ್ಯ ಕೇಂದ್ರವಾಗಿ ಸೇವೆ ಸಲ್ಲಿಸುತ್ತಿದೆ.
*ಕೆ.ಎಮ್.ಆರ್.ಡಿ.ಸಿ ಅನುದಾನದಿಂದ ಮೂಲಸೌಕರ್ಯ ಅಭಿವೃದ್ಧಿ:*
ಪ್ರಸ್ತುತ ಸಂಸ್ಥೆಯಲ್ಲಿ ‘ಕರ್ನಾಟಕ ಮೈನಿಂಗ್ ರೀಜನ್ ಡೆವಲಪ್‌ಮೆಂಟ್ ಕಾರ್ಪೊರೇಷನ್' ಅನುದಾನದಡಿ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಮತ್ತು ಉನ್ನತೀಕರಣ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಸಂಸ್ಥೆಯ ಬೆಳವಣಿಗೆಗೆ ಹೊಸ ಆಯಾಮ ನೀಡುತ್ತಿವೆ.
*ಜುಲೈ 23 ರಂದು ಹಲವು ಕಾರ್ಯಕ್ರಮಗಳು:
ಸುವರ್ಣ ಸಂಭ್ರಮದ ಉದ್ಘಾಟನೆ: ಸಂಸ್ಥೆಯ ನಿವೃತ್ತ ಪ್ರಾಂಶುಪಾಲರಾದ ಡಾ. ಸೈಯದ್ ಅತ್ತಾರ ಫಾತಿಮಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವೈದ್ಯರತ್ನ ತಾರಾನಾಥರ ಪುತ್ಥಳಿ ಅನಾವರಣದ ಭೂಮಿಪೂಜೆ: ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ನಡೆಯಲಿದ್ದು, ಸಂಘದ ಅಧ್ಯಕ್ಷ ಡಾ. ಮಾರಿದೇವ ಶರ್ಮಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ರಾಜ್ಯಮಟ್ಟದ ಶೈಕ್ಷಣಿಕ ಸಂವಾದ: ಸಂಸ್ಥೆಯ ಸ್ನಾತಕೋತ್ತರ ಪಂಚಕರ್ಮ ವಿಭಾಗದ ವತಿಯಿಂದ “ಬಸ್ತಿ – ಅರ್ಧ ಚಿಕಿತ್ಸೆಯೇ ಅಥವಾ ಪೂರ್ಣ ಚಿಕಿತ್ಸೆಯೇ?” ಎಂಬ ವಿಷಯದ ಕುರಿತು ಸಂವಾದ ನಡೆಯಲಿದೆ. ಇದರಲ್ಲಿ ರಾಜ್ಯದ 25 ಆಯುರ್ವೇದ ಮಹಾವಿದ್ಯಾಲಯಗಳ ಪಂಚಕರ್ಮ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಶೈಕ್ಷಣಿಕ ಹಾಗೂ ವೈಜ್ಞಾನಿಕ ಅಭಿಪ್ರಾಯ ಮಂಡಿಸಲಿದ್ದಾರೆ.
ಈ ಸಂಭ್ರಮದ ಗೌರವಾಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಜಾನಕಿ ವೈ. ಎಸ್. ಅವರು ವಹಿಸಲಿದ್ದು, ಆಯೋಜನಾ ಅಧ್ಯಕ್ಷರಾಗಿ ಡಾ. ರಾಜಶೇಖರ್ ಎಸ್. ಗಾಣಿಗೇರ, ಕಾರ್ಯದರ್ಶಿಯಾಗಿ ಡಾ. ಸಂತೋಷ್ ಎಲ್. ಯಡಹಳ್ಳಿ ಹಾಗೂ ಸಹ-ಕಾರ್ಯದರ್ಶಿಗಳಾಗಿ ಡಾ. ವಿಜಯಮಹಾಂತೇಶ್ ಹೂಗಾರ್ ಮತ್ತು ಡಾ. ಶಿಲ್ಪಶ್ರೀ ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಸ್ಥೆಯ ಐವತ್ತು ವರ್ಷಗಳ ಸರ್ಕಾರಿ ಸೇವೆ ಹಾಗೂ ಶೈಕ್ಷಣಿಕ ಪಯಣವನ್ನು ಸ್ಮರಿಸುವ ಈ ಸುವರ್ಣ ಸಂಭ್ರಮವು ಮಹಾವಿದ್ಯಾಲಯದ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.