LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ವಿಜಯಕುಮಾರ್ ಕಲವಲೂರು  ಆಗ್ರಹ

ಕೊಪ್ಪಳ: ಕೊಪ್ಪಳ ನಗರಸಭೆಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿಗಳ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ವಿಜಯಕುಮಾರ್ ಕವಲೂರು ಅವರು ತೀವ್ರವಾಗಿ ಆಗ್ರಹಿಸಿದ್ದಾರೆ.
ಸೋಮವಾರದಂದು ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳ ನಗರದ ಜನತೆಯ ಆಶೋತ್ತರಗಳು ಹಾಗೂ ನಿರೀಕ್ಷೆಗಳನ್ನು ಪೂರೈಸುವಲ್ಲಿ ನಗರಸಭೆಯು ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೂರಿದರು. ಈ ಹಿಂದಿನಿಂದಲೂ ನಗರಸಭೆಯಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಲೇ ಇವೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಮಾನ್ಯ ಲೋಕಾಯುಕ್ತರು ಎರಡು ಬಾರಿ ದಾಳಿ ನಡೆಸಿದ್ದು, ಹತ್ತು ಕೋಟಿಗೂ ಅಧಿಕ ಹಣದ ಭ್ರಷ್ಟಾಚಾರ ನಡೆದಿರುವ ಕುರಿತು ದೂರುಗಳು ದಾಖಲಾಗಿವೆ. ಇಷ್ಟೆಲ್ಲಾ ಬೆಳವಣಿಗೆಗಳಾದರೂ ನಗರಸಭೆಯ ಅಧಿಕಾರಿಗಳು ತಮ್ಮ ಭಂಡತನದ ಭ್ರಷ್ಟಾಚಾರವನ್ನು ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ತಮಗೆ ಲಭ್ಯವಾಗಿರುವ ಅಧಿಕೃತ ದಾಖಲೆಗಳ ಪ್ರಕಾರ, ಕೇವಲ ಮೂರು ತಿಂಗಳ ಅವಧಿಯಲ್ಲಿ ನಗರಸಭೆ ನಿಧಿಯಿಂದ ಒಂದು ಕೋಟಿಗೂ ಅಧಿಕ ಹಣ ಹಾಗೂ ನಗರಸಭೆಯ ವಿವಿಧ ಬೇರೆ ಬೇರೆ ನಿಧಿಗಳಿಂದ ಮೂರು ಕೋಟಿಗೂ ಅಧಿಕ ಹಣದ ಚೆಕ್ ಬರೆದು, ಒಟ್ಟಾರೆಯಾಗಿ ನಾಲ್ಕು ಕೋಟಿಗೂ ಹೆಚ್ಚು ರೂಪಾಯಿಗಳನ್ನು ತಮಗೆ ಇಷ್ಟಬಂದಂತೆ ಖರ್ಚು ಮಾಡಲಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿ ದುರುಪಯೋಗಪಡಿಸಿಕೊಂಡಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನಿಯಮಾವಳಿಗಳ ಪ್ರಕಾರ ಒಂದು ಲಕ್ಷದ ಒಳಗಿನ, ಐದು ಲಕ್ಷದ ಒಳಗಿನ ಹಾಗೂ ಐದು ಲಕ್ಷದ ಮೇಲ್ಪಟ್ಟ ಕಾಮಗಾರಿಗಳಿಗೆ ಸೂಕ್ತ ಕ್ರಿಯಾ ಯೋಜನೆ ಸಿದ್ಧಪಡಿಸಿ, ಟೆಂಡರ್ ಕರೆದು, ಸ್ಥಳೀಯ ಹಾಗೂ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಬೇಕಾಗುತ್ತದೆ. ಆದರೆ ಇಲ್ಲಿ ನಗರಸಭೆ ಅಧಿಕಾರಿಗಳು ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಯಾವುದೇ ಪ್ರಕ್ರಿಯೆ ನಡೆಸದೇ ತಮಗೆ ಇಷ್ಟಬಂದ ವ್ಯಕ್ತಿಗಳಿಗೆ ಹಾಗೂ ತಮಗೆ ಬೇಕಾದ ಏಜೆನ್ಸಿಗಳಿಗೆ ಕಾಮಗಾರಿಗಳನ್ನು ನೀಡಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ವಿಜಯಕುಮಾರ್ ಕವಲೂರು ಆರೋಪಿಸಿದರು.
ಕನ್ನಡ ರಾಜ್ಯೋತ್ಸವ ಮತ್ತು ಶ್ರೇಷ್ಠ ಸಂತ ಶ್ರೀ ಕನಕದಾಸರ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯಕ್ರಮಗಳಿಗೆ ಒಂದೇ ಕೆಲಸಕ್ಕೆ ಮೂರು ಬಾರಿ ಬಿಲ್ ಎತ್ತಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ. ಅದೇ ರೀತಿಯಾಗಿ, ಶೆಡ್‌ನಲ್ಲಿ ರಿಪೇರಿಯಲ್ಲಿದ್ದ ಕಸ ವಿಲೇವಾರಿ ವಾಹನಗಳಿಗೆ ರಿಪೇರಿ ವೆಚ್ಚವನ್ನು ತೋರಿಸಿ, ಅವುಗಳಿಗೆ ಇಂಧನ ತುಂಬಿಸಿರುವ ನೆಪದಲ್ಲಿ ಸುಳ್ಳು ಬಿಲ್ ಸೃಷ್ಟಿಸಲಾಗಿದೆ. ನಗರಸಭೆಯ ೪೦ಕ್ಕೂ ಹೆಚ್ಚು ವಾಹನಗಳಿಗೆ ಇಂಧನದ ಹೆಸರಿನಲ್ಲಿ ತಿಂಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಖಾಸಗಿ ಬಂಕ್ ಮಾಲೀಕರಿಗೆ ಪಾವತಿಸುತ್ತಿರುವುದನ್ನು ಗಮನಿಸಿದರೆ ಇದರ ಹಿಂದೆ ದೊಡ್ಡ ಇಂಧನ ಮಾಫಿಯಾ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಕಸ ಸಂಗ್ರಹಣಾ ಘಟಕ ನಿರ್ಮಾಣವಾದಾಗಿನಿಂದಲೂ ಇಲ್ಲಿಯವರೆಗೆ ಕೋಟ್ಯಂತರ ರೂಪಾಯಿ ದುರುಪಯೋಗವಾಗಿದೆ. ಘಟಕಕ್ಕಾಗಿ ಸುಮಾರು ಒಂದು ಕೋಟಿ ನಲವತ್ತು ಲಕ್ಷ ರೂಪಾಯಿ ಬೆಲೆಬಾಳುವ ಯಂತ್ರವನ್ನು ಖರೀದಿಸಲಾಗಿದೆಯಾದರೂ, ಅದರಲ್ಲೂ ಭ್ರಷ್ಟಾಚಾರ ನಡೆದಿದ್ದು ಆ ಯಂತ್ರ ಒಂದು ದಿನವೂ ಚಾಲನೆಯಾಗಿಲ್ಲ ಎಂದು ಅವರು ವಿವರಿಸಿದರು.
ಬೀದಿ ದೀಪಗಳ ನಿರ್ವಹಣೆ, ಹೊಸ ಬೀದಿ ದೀಪಗಳ ಅಳವಡಿಕೆ ಹಾಗೂ ಹೊಸ ಕೇಬಲ್ ಅಳವಡಿಕೆಯಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ನಿಯಮದ ಪ್ರಕಾರ ಪ್ರತಿಯೊಂದು ಕಾಮಗಾರಿ ನಡೆಯುವ ಸ್ಥಳದಲ್ಲೂ ಕಾಮಗಾರಿಯ ಹೆಸರು, ಅಂದಾಜು ಮೊತ್ತ, ಗುತ್ತಿಗೆದಾರನ ಹೆಸರು ಮತ್ತು ಯಾವ ಅನುದಾನದಡಿ ಕೆಲಸ ನಡೆಯುತ್ತಿದೆ ಎಂಬ ಮಾಹಿತಿಯುಳ್ಳ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು. ಆದರೆ ನಗರಸಭೆಯವರು ಎಲ್ಲಿಯೂ ನಾಮಫಲಕ ಹಾಕುತ್ತಿಲ್ಲ. ಇದರಿಂದಾಗಿ ಒಂದೇ ಕಾಮಗಾರಿಗೆ ಬೇರೆ ಬೇರೆ ಇಲಾಖೆಗಳಿಂದ ಹಣ ಪಡೆದು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೇವಲ ಕಾಗದದ ಮೇಲೆ ತೋರಿಸಿ, ವಾಸ್ತವದಲ್ಲಿ ನಡೆಯದೇ ಇರುವ ಕಾಮಗಾರಿಗಳಿಗೆ ಬೋಗಸ್ ಬಿಲ್ಲುಗಳನ್ನು ಮಾಡಲಾಗಿದೆ. ಇದಕ್ಕೆ ತೃತೀಯ ಸಂಸ್ಥೆಯ ತಪಾಸಣಾ ವರದಿಗಾರರು (ಥರ್ಡ್ ಪಾರ್ಟಿ ಇನ್ಸ್‌ಪೆಕ್ಷನ್) ಸಾಥ್ ನೀಡಿದ್ದು, ಅಂತಹ ಸಂಸ್ಥೆಯನ್ನು ತಕ್ಷಣ ಕಪ್ಪು ಪಟ್ಟಿಗೆ ಸೇರಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದರು. ಇದರೊಂದಿಗೆ ಗಣೇಶ ಹಬ್ಬದ ಸಂದರ್ಭದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಖಾಸಗಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ಬಾಡಿಗೆ ನೀಡಿ ಹಣ ಲೂಟಿ ಮಾಡಲಾಗಿದೆ ಹಾಗೂ ಸರ್ಕಾರಕ್ಕೆ ಪಾವತಿಸಬೇಕಾದ ಜಿಎಸ್‌ಟಿ ಹಣವನ್ನು ಕಟ್ಟದೆ, ಅದನ್ನು ಕೂಡ ಕಾಮಗಾರಿಯ ಹೆಸರಿನಲ್ಲಿ ಅಧಿಕಾರಿಗಳು ಜೇಬಿಗೆ ಇಳಿಸಿಕೊಂಡಿದ್ದಾರೆ ಎಂದು ಕವಲೂರು ದೂರಿದರು.
ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಬಳಕೆಯಾಗಬೇಕಾದ ಸಾರ್ವಜನಿಕರ ತೆರಿಗೆ ಹಣವು ಭ್ರಷ್ಟರ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಜೇಬು ಸೇರುತ್ತಿದೆ. ಇಂತಹ ನೂರಾರು ಕಾಮಗಾರಿಗಳ ಭ್ರಷ್ಟಾಚಾರದ ಕುರಿತು ಉನ್ನತ ಮಟ್ಟದ ಸಿಬಿಐ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ದುರುಪಯೋಗವಾಗಿರುವ ಸಾರ್ವಜನಿಕರ ಹಣವನ್ನು ವಸೂಲಿ ಮಾಡಬೇಕು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ತೀವ್ರವಾಗಿ ಒತ್ತಾಯಿಸುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.
ಈ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷರಾದ ಜಿ.ಎಸ್. ಗೋನಾಳ, ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥ ಸಾಲಿಮಠ, ತಾಲೂಕು ಅಧ್ಯಕ್ಷರಾದ ಮಹೇಶ ಅಲ್ಲಾನಗರ ಹಾಗೂ ಜಿಲ್ಲಾ ಮುಖಂಡರಾದ ಶಿವಕುಮಾರ ಏಣಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್