ಬಳ್ಳಾರಿ, ಜುಲೈ 23: ಮಹಿಳೆಯರು ಸಮಾಜದ ಅಭಿವೃದ್ಧಿಯ ಮೂಲಶಕ್ತಿಯಾಗಿದ್ದು, ಜ್ಞಾನ ವಿಕಾಸ ಕೇಂದ್ರಗಳಂತಹ ವೇದಿಕೆಗಳು ಮಹಿಳೆಯರ ಸಾಮರ್ಥ್ಯವನ್ನು ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ, ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲೂ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು ಅದರ ಜೊತೆಗೆ ಕೌಟುಂಬಿಕ ನಿರ್ವಹಣೆಯ ಕಲೆಯನ್ನು ಸಹ ತಿಳಿದಿರಬೇಕು ಸಣ್ಣಪುಟ್ಟ ಗೃಹ ಕೈಗಾರಿಕೆಗಳನ್ನು ಮಾಡಿಕೊಂಡು ಆರ್ಥಿಕವಾಗಿ ಸಮಾಜಿಕವಾಗಿ ಸಬಲರಾಗಬೇಕು ಎಂದು ನಿವೃತ್ತ ಉಪನ್ಯಾಸಕರಾದ ಸುಶೀಲಾ ಶಿರೂರು ಮಹಿಳೆಯರಿಗೆ ಕರೆ ನೀಡಿದರು.
ಅವರು ಇಂದು ಪಾರ್ವತಿ ನಗರದ ಈಶ್ವರ ದೇವಸ್ಥಾನದಲ್ಲಿ ಮಾರುತಿ ನಗರದ ವ್ಯಾಪ್ತಿಯಲ್ಲಿ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ. ಟ್ರಸ್ಟ್), ಬಳ್ಳಾರಿ–1 ತಾಲೂಕಿನ ಗಾಂಧಿನಗರ ವಲಯದ ಮಾರುತಿ ನಗರ ಕಾರ್ಯಕ್ಷೇತ್ರದ 'ಶ್ರೀ ನಾರಿ ಶಕ್ತಿ ಮಹಿಳಾ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿ, ಮಹಿಳಾ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಉಪನ್ಯಾಸ ನೀಡಿ, ಇಂತಹ ಕಾರ್ಯಕ್ರಮಗಳಿಂದ ಮಹಿಳೆಯರು ತಮ್ಮ ಹಕ್ಕುಗಳು, ಕರ್ತವ್ಯಗಳು ಹಾಗೂ ಸಮಾಜದಲ್ಲಿ ತಮ್ಮ ಪಾತ್ರದ ಬಗ್ಗೆ ಹೆಚ್ಚಿನ ಅರಿವು ಪಡೆದು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಪರಮಪೂಜ್ಯ ಪದ್ಮಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಡಾ. ಮಾತೃಶ್ರೀ ಹೇಮಾವತಿ ಅಮ್ಮ ಅವರ ಮಾರ್ಗದರ್ಶನದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಈ ವಾರ್ಷಿಕೋತ್ಸವವನ್ನು ಆಯೋಜಿಸಲಾಗಿದ್ದು, ಕೇಂದ್ರದ ಸದಸ್ಯರು, ಸ್ವಸಹಾಯ ಸಂಘಗಳ ಮಹಿಳೆಯರು ಹಾಗೂ ಸ್ಥಳೀಯರು ಉತ್ಸಾಹದಿಂದ ಭಾಗವಹಿಸಿದ್ದರು.
ಕಾರ್ಯಕ್ರಮದ ನೇತೃತ್ವವನ್ನು ಆಶಾ ಅವರು ವಹಿಸಿಕೊಂಡಿದ್ದು, ಮಹಿಳೆಯರಲ್ಲಿ ಆತ್ಮವಿಶ್ವಾಸ, ನಾಯಕತ್ವ, ಸಾಮಾಜಿಕ ಜವಾಬ್ದಾರಿ ಹಾಗೂ ಸ್ವಾವಲಂಬನೆಯ ಮನೋಭಾವ ಬೆಳೆಸುವ ಉದ್ದೇಶದಿಂದ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಮತ್ತು ನಗರ ಪ್ರದೇಶಗಳ ಮಹಿಳೆಯರನ್ನು ಸ್ವಸಹಾಯ ಸಂಘಗಳ ಮೂಲಕ ಒಗ್ಗೂಡಿಸಿ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸದೃಢಗೊಳಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ಒಂದರ ಬಸವರಾಜ್ ಅವರು ಮಾತನಾಡಿ ಜ್ಞಾನ ವಿಕಾಸ ಕೇಂದ್ರದ ಒಂದು ವರ್ಷದ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಲಾಗಿದ್ದು, ಕೇಂದ್ರದ ಮೂಲಕ ಮಹಿಳೆಯರಲ್ಲಿ ಉಳಿತಾಯದ ಅಭ್ಯಾಸ, ಆರೋಗ್ಯ ಜಾಗೃತಿ, ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆ, ಪರಿಸರ ಸಂರಕ್ಷಣೆ, ಸಾಮಾಜಿಕ ಸೇವೆ ಹಾಗೂ ವ್ಯಕ್ತಿತ್ವ ವಿಕಾಸ ಕುರಿತಂತೆ ನಿರಂತರ ತರಬೇತಿಗಳನ್ನು ನೀಡಲಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಹಾಗೂ ಕೇಂದ್ರದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಸದಸ್ಯೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ಮಹಿಳೆಯರಿಗೆ ಪ್ರೇರಣಾದಾಯಕ ಉಪನ್ಯಾಸ, ಆರೋಗ್ಯ ಮತ್ತು ಸ್ವಚ್ಛತೆ ಕುರಿತು ಜಾಗೃತಿ, ಕುಟುಂಬ ಮೌಲ್ಯಗಳ ಕುರಿತು ಮಾರ್ಗದರ್ಶನ ಹಾಗೂ ಸಂಘಟಿತ ಬದುಕಿನ ಮಹತ್ವವನ್ನು ತಿಳಿಸಲಾಯಿತು.
ಮಹಿಳೆಯರು ಒಗ್ಗಟ್ಟಿನಿಂದ ಸಂಘದ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸಿ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಲಾಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಲಾಗಿದ್ದು, ಸ್ವಸಹಾಯ ಸಂಘಗಳ ಮೂಲಕ ಸಣ್ಣ ಉದ್ದಿಮೆ, ಉಳಿತಾಯ, ಸಾಲ ಸೌಲಭ್ಯ ಹಾಗೂ ಜೀವನೋಪಾಯ ಅಭಿವೃದ್ಧಿಗೆ ಯೋಜನೆ ನೀಡುತ್ತಿರುವ ಬಗ್ಗೆ ವಿವರವಾಗಿ ತಿಳಿಸಲಾಯಿತು
ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಘಗಳ ಸದಸ್ಯರು, ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯೆಯರು ಭಾಗವಹಿಸಿದ್ದರು. ಕೊನೆಯಲ್ಲಿ ಸಂಘದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.