ಬೆಂಗಳೂರು, ಆಗಸ್ಟ್ 1: ಸರ್ಕಾರಿ ಸೇವೆಯಿಂದ ನಿವೃತ್ತರಾದ ಲಿಡ್‌ಕರ್‌ನ ಬೆಳಗಾವಿ ಜಿಲ್ಲಾ ಸಂಯೋಜಕರಾದ . ರುದ್ರೇಶಿ ಹಾಗೂ ಹಾವೇರಿ ಜಿಲ್ಲಾ ಸಂಯೋಜಕರಾದ ಶ್ರೀ ಕೃಷ್ಣಪ್ಪ ಅವರಿಗೆ ಬೆಂಗಳೂರಿನ ವಸಂತನಗರದಲ್ಲಿರುವ ಲಿಡ್‌ಕರ್ ಮುಖ್ಯ ಕಚೇರಿಯಲ್ಲಿ ಆತ್ಮೀಯ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ ನಡೆಯಿತು.
ಲಿಡ್‌ಕರ್ ಅಧ್ಯಕ್ಷ ಶ್ರೀ ಮುಂಡರಗಿ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಇಬ್ಬರು ಅಧಿಕಾರಿಗಳ ಸೇವೆಯನ್ನು ಸ್ಮರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು, ಶ್ರೀ ರುದ್ರೇಶಿ ಅವರು 41 ವರ್ಷ 6 ತಿಂಗಳಿಗೂ ಹೆಚ್ಚು ಅವಧಿಯ ಸೇವೆ ಸಲ್ಲಿಸಿರುವುದು ಲಿಡ್‌ಕರ್ ಇತಿಹಾಸದಲ್ಲೇ ಅಪರೂಪದ ಸಾಧನೆ. ಸಂಸ್ಥೆಯ ಬೆಳವಣಿಗೆಯೊಂದಿಗೆ ತಮ್ಮ ಬದುಕನ್ನೇ ಬೆಸೆದುಕೊಂಡು ಪ್ರಾಮಾಣಿಕವಾಗಿ ದುಡಿದ ಅವರು ಇಂದಿನ ಯುವ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಶ್ರೀ ಕೃಷ್ಣಪ್ಪ ಅವರೂ ತಮ್ಮ ಕರ್ತವ್ಯವನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿ, ಸಹೋದ್ಯೋಗಿಗಳ ಪ್ರೀತಿ ಮತ್ತು ಜನರ ವಿಶ್ವಾಸ ಗಳಿಸಿದ ಅಧಿಕಾರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
"ನಿವೃತ್ತಿ ಎನ್ನುವುದು ಹುದ್ದೆಯಿಂದ ಮಾತ್ರ; ಸೇವೆಯಿಂದ ಅಲ್ಲ. ನಾವು ಕೆಲಸ ಮಾಡುವ ಅವಧಿಯಲ್ಲಿ ಸಮಾಜಕ್ಕೆ ಏನು ಕೊಟ್ಟೆವು, ಜನರ ಬದುಕಿನಲ್ಲಿ ಎಂತಹ ಬದಲಾವಣೆ ತಂದೆವು ಎಂಬುದೇ ನಮ್ಮ ನಿಜವಾದ ಪರಿಚಯ. ಕಚೇರಿಯ ಬಾಗಿಲು ತೆರೆಯುವ ಮೊದಲು ನಮ್ಮ ಮನಸ್ಸು ತೆರೆಯಬೇಕು. ಮಾನವೀಯತೆಯೇ ಪ್ರತಿಯೊಬ್ಬ ಸರ್ಕಾರಿ ನೌಕರನ ದೊಡ್ಡ ಸಂಪತ್ತು" ಎಂದು ಅಧ್ಯಕ್ಷರು ಹೇಳಿದರು.
ಲಿಡ್‌ಕರ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಹೆಚ್.ನಟರಾಜ್ ಮಾತನಾಡಿ, ಇಬ್ಬರು ಅಧಿಕಾರಿಗಳು ಸಂಸ್ಥೆಯ ಬೆಳವಣಿಗೆಗೆ ನೀಡಿರುವ ಕೊಡುಗೆ ಸದಾ ಸ್ಮರಣೀಯವಾಗಿರಲಿದೆ. ಅವರ ಅನುಭವ, ಶಿಸ್ತು ಮತ್ತು ಸೇವಾ ಮನೋಭಾವ ಮುಂದಿನ ಪೀಳಿಗೆಯ ಅಧಿಕಾರಿಗಳಿಗೆ ದಾರಿದೀಪವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಲಿಡ್‌ಕರ್‌ನ ಹಿರಿಯ ಅಧಿಕಾರಿಗಳಾದ ಮೋನಪ್ಪ ಕಟ್ಟಿಮನಿ,ಪ್ರಾಣೇಶ್ ಮತ್ತು ಸಿಬ್ಬಂದಿ, ಚರ್ಮ ಕುಶಲಕರ್ಮಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದು, ನಿವೃತ್ತ ಅಧಿಕಾರಿಗಳಿಗೆ ಆತ್ಮೀಯವಾಗಿ ಶುಭ ಹಾರೈಸಿದರು.