ಬಾಗಲಕೋಟೆ, ಜುಲೈ ೩೧ : ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, ಜುಲೈ ೩೦ ವರೆಗೆ ಒಟ್ಟು ೧೩,೫೧,೪೬೧ ಗಣತಿ ನಮೂನೆಗಳ ಡಿಜಿಟಲೀಕರಣವಾಗಿರುವುದಾಗಿ ಜಿಲ್ಲಾಧಿಕಾರಿ ಸಂಗಪ್ಪ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಪ್ರಗತಿ ಕುರಿತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಇಲ್ಲಿಯವರೆಗೆ ಆಗಿರುವ ಪ್ರಗತಿಯ ಮಾಹಿತಿಯನ್ನು ತಿಳಿಸಿದರು. ಜಿಲ್ಲೆಯ ೭ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಟ್ಟು ೧೬,೩೧,೨೦೨ ಮತದಾರರಿದ್ದು, ಈ ಎಲ್ಲ ಮತದಾರರ ಮುದ್ರಿತವಾಗಿರುವ ಗಣತಿ ನಮೂನೆಗಳನ್ನು ಈಗಾಗಲೇ ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗಳಿಂದ ವಿತರಿಸಲಾಗಿದೆ. ಇಲ್ಲಿಯವರೆಗೆ ಒಟ್ಟು ೧೩,೫೧,೪೬೧ ಗಣತಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದ್ದು, ೯೧,೧೮೭ ಡಿಜಿಟಲೀಕರಣಕ್ಕೆ ಬಾಕಿ ಉಳಿದಿವೆ ಎಂದು ತಿಳಿಸಿದರು.
ಪ್ರತಿದಿನ ಬಿಎಲ್‌ಓಗಳು ಭೌತಿಕ ಪರಿಶೀಲನೆಯೊಂದಿಗೆ ಗುರುತಿಸಿದ ಗೈರು, ಸ್ಥಳಾಂತರ, ನಿಧನ ಡ್ಯೂಪ್ಲಿಕೇಟ ಆದಂತಹ ಮತದಾರರ ವಿವರಗಳನ್ನು ತಮ್ಮ ಆಪ್‌ನಲ್ಲಿ ಅಪ್ಲೋಡ್ ಮಾಡಿರುತ್ತಾರೆ. ಪರಿಶೀಲನೆ ಕಾರ್ಯದಲ್ಲಿ ಒಟ್ಟು ೧೦,೮೪೦ ಗೈರು ಮತದಾರರು ಇದ್ದು, ಸ್ಥಳಾಂತರಗೊಂಡ ಮತದಾರರ ಸಂಖ್ಯೆ ೧,೧೩,೬೯೦, ನಿಧನ ಹೊಂದಿರುವ ಮತದಾರರ ಸಂಖ್ಯೆ ೪೧,೨೩೯, ಡ್ಯೂಪ್ಲಿಕೇಟ್ ಮತದಾರರ ಸಂಖ್ಯೆ ೨೧,೯೫೮, ಇತರೆ ೮೨೭ ಮತದಾರರು ಇದ್ದಾರೆ. ಬಿಎಲ್‌ಓಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ನಿಮ್ಮ ಪಕ್ಷದ ವತಿಯಿಂದ ನೇಮಿಸಿದ ಮತಗಟ್ಟೆ ಮಟ್ಟದ ಏಜೆಂಟರುಗಳಿಗೆ ಭಾಗವಾರು ಎ.ಎಸ್.ಡಿಡಿಗಳ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ. ಎ.ಎಸ್.ಡಿ.ಡಿ ಪಟ್ಟಿಯಲ್ಲಿ ಯಾವುದೇ ರೀತಿಯ ಆಕ್ಷೇಪಣೆಗಳು ಇದ್ದಲ್ಲಿ ಸಂಬಂಧಪಟ್ಟ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ಮತದಾರರ ನೋಂದಣಾಧಿಕಾರಿಗಳ ಗಮನಕ್ಕೆ ತರಲು ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಂದ ನೇಮಕಗೊಂಡ ಮತಗಟ್ಟೆ ಮಟ್ಟದ ಏಜೆಂಟರುಗಳ ಸಂಪೂರ್ಣವಾಗಿ ಸಹಕಾರ ನೀಡಿದ್ದಾರೆ. ಇದೇ ರೀತಿಯ ಪರಿಷ್ಕರಣೆ ಕಾರ್ಯ ಪೂರ್ಣಗೊಳ್ಳುವವರೆಗೆ ತಮ್ಮ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕ ಅಧಿಕಾರಿ ಬಿ.ಎಸ್.ಕಡಕಬಾವಿ, ಚುನಾವಣಾ ವಿಭಾಗದ ಮಹೇಶ ಪಾಂಡವ ಸೇರಿದಂತೆ ವಿವಿಧ ರಾಜಕೀಯ ಪ್ರತಿನಿಧಿಗಳಾದ ಮಲ್ಲಿಕಾರ್ಜುನ ಕಾಂಬಳೆ, ಪ್ರಭು ಹಳ್ಳೂರ, ಶರಥ ಪಾಟೀಲ, ಮಲ್ಲಿಕಾರ್ಜುನ ಮುತ್ತಪ್ಪನವರ, ಶಿವಾನಂದ ಸುರಪುರ ಹಾಗೂ ಇತರರು ಉಪಸ್ಥಿತರಿದ್ದರು.