ಬಳ್ಳಾರಿ: 29;ಶ್ರೀ ಗುರುಪೂರ್ಣಿಮೆ ಹಿನ್ನೆಲೆ ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ಶ್ರೀಮಠದಲ್ಲಿ ವಿಶೇಷ ಪೂಜೆ, ಅಲಂಕಾರ, ಸಾಮೋಹಿಕ ಶ್ರೀ ಸತ್ಯನಾರಾಯಣ ಪೂಜೆ ಸೇರಿದಂತೆ ವಿವಿಧ ಪೂಜೆಗಳು ಬುಧವಾರ ವಿಜೃಂಭಣೆಯಿಂದ ನಡೆದವು. ಬೆಳಿಗ್ಗೆ ಗುರುರಾಯರಿಗೆ ವಿಶೇಷ ಪೂಜೆ, ಪಂಚಾಮೃತಾಭಿಷೇಕ , ವಿಶೇಷ ಅಲಂಕಾರ, ನೈವೇದ್ಯ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ಶ್ರೀಮಠದ ಆಡಳಿತಾಧಿಕಾರಿ ಪಂ. ಶ್ರೀ ಪ್ರಸನ್ನಾಚಾರ ಅವರ ನೇತೃತ್ವದಲ್ಲಿ ನಡೆದವು. ಶ್ರೀ ಗುರುಪೂರ್ಣಿಮೆ ಹಿನ್ನೆಲೆ ನಗರ ಸೇರಿದಂತೆ ನಾನಾ ಕಡೆಯಿಂದ ಭಕ್ತರ ದಂಡೇ ಶ್ರೀಮಠಕ್ಕೆ ಹರಿದು ಬಂದಿತ್ತು. ಭಕ್ತರು ವಿಶೇಷ ಪೂಜೆ, ಅರ್ಚನೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಇದಕ್ಕೂ ಮುನ್ನ ಸಾಮೋಹಿಕ ಸತ್ಯನಾರಾಯಣ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಶ್ರೀಮಠದ ಆಡಳಿತಾಧಿಕಾರಿ ಪಂ.ಪ್ರಸನ್ನಾಚಾರ ಅವರು ಮಾತನಾಡಿ, ಶ್ರೀ ಗುರುಪೂರ್ಣಿಮೆ ಹಿನ್ನೆಲೆ ಶ್ರೀಮಠದಲ್ಲಿ ವಿಶೇಷ ಪೂಜೆ, ಸಾಮೋಹಿಕ ಶ್ರೀ ಸತ್ಯನಾರಾಯಣ ಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಲಾಗಿದೆ. ಶ್ರೀ ವೇದವ್ಯಾಸರು ಅವತಾರ ಮಾಡಿದ ಪವಿತ್ರ ದಿನವೇ ಶ್ರೀ ಗುರುಪೂರ್ಣಿಮೆ, ಈ ದಿನದಂದು ವಿಶೇಷ ಪೂಜೆ ಸಲ್ಲಿಸಿದರೆ ಎಲ್ಲ ಇಷ್ಟಾರ್ಥಗಳು ಈಡೇರಲಿವೆ ಎಂದರು. ಶ್ರೀರಾಘವೇಂದ್ರ ಸ್ವಾಮಿಗಳವರ ಆರಾಧನಾ ಮಹೋತ್ಸವದಲ್ಲಿ ರಾಜಬೀದಿಯ ಮಹಾರಥೋತ್ಸವಕ್ಕೆ ಒಂದು ದೊಡ್ಡದಾದ ಸುಂದರ ಭವ್ಯ ರಥವನ್ನು ನಿರ್ಮಾಣ ಮಾಡಲು ಗುರುಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿಗಳವರ ಆದೇಶದಂತೆ ನಿಶ್ಚಯಿಸಲಾಗಿದೆ. ಭಕ್ತರು ನೂತನ ರಥ ನಿರ್ಮಾಣದ ಸೇವೆಯಲ್ಲಿ ಭಾಗವಹಿಸಿ ತನು, ಮನ, ಧನದಿಂದ ಸೇವೆ ಸಲ್ಲಿಸಬೇಕು. ನೂತನ ರಥ ನಿರ್ಮಾಣಕ್ಕೆ ಸುಮಾರು 12 ಲಕ್ಷ ರೂ.ಆಗಬಹುದು ಎಂದು ಅಂದಾಜಿಸಲಾಗಿದೆ. ನಮ್ಮ ನಮ್ಮ ಮನೋರಥಗಳ ಪೂರ್ಣವಾಗಲು ಶ್ರೀ ಗುರು ರಾಯರಿಗೆ ಸಮರ್ಪಿಸಲಿರುವ ಈ ನೂತನ ರಥ ನಿರ್ಮಾಣ ಸೇವೆಯಲ್ಲಿ ಪ್ರತಿಯೊಬ್ಬ ಭಕ್ತರು, ಭಾಗವಹಿಸಿ ತನು, ಮನ, ಧನದಿಂದ ಸೇವೆ ಸಲ್ಲಿಸಬೇಕು. ದೇಣಿಗೆ ಸಲ್ಲಿಸುವ ಪ್ರತಿಯೊಬ್ಬ ಭಕ್ತರು ಶ್ರೀಮಠದ ಕಾರ್ಯಾಲಯದಲ್ಲಿ ನೀಡಿ ಅಧಿಕೃತ ರಶೀದಿ ಪಡೆಯಬೇಕು ಎಂದರು.