ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಇದ್ದಾಗಲೂ ಕಾರ್ಖಾನೆಗಳಿಗೆ ನೀರು ಹರಿಸುತ್ತಿರುವ ಕ್ರಮ ಅಚ್ಚುಕಟ್ಟು ರೈತರ ಹೊಟ್ಟೆಗೆ ಬರೆ ಕೊಟ್ಟಂತೆ ಎಂದು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ (ಜಂಟಿ ಕ್ರಿಯಾ ವೇದಿಕೆ) ಸಂಚಾಲಕ ಮಂಜುನಾಥ ಗೊಂಡಬಾಳ ಅವರು ಖಂಡಿಸಿದರು.
ನಗರಸಭೆ ಆವರಣದ ಬಲ್ಡೋಟ ಹಟಾವೋ ಕೊಪ್ಪಳ ಬಚಾವೋ, ಮಾಲಿನ್ಯಕಾರಿ ಕಾರ್ಖಾನೆಗಳನ್ನು ತೊಲಗಿಸಿ ಎಂದು ಆಗ್ರಹಿಸಿ ನಡೆಯುತ್ತಿರುವ 274ನೇ ದಿನದ ಧರಣಿಯಲ್ಲಿ ಅವರು ಮಾತನಾಡಿ, 'ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ 18 ಲಕ್ಷ ಎಕರೆಗೆ ನೀರುಣಿಸುವ ಈ ಜಲಾಶಯ ಮಳೆ ಕೊರತೆಯ ಕಾರಣದಿಂದ ಸರಾಸರಿಗಿಂತ ಕಡಿಮೆ ಪ್ರಮಾಣದ ಒಳಹರಿವು ಇದೆ. ನೀರಾವರಿ ಇಂಜನೀಯರರು ಕೇವಲ ಕಾರ್ಖಾನೆಗಳಿಗೆ ನೀರು ಕೊಡುವ ಉದ್ದೇಶದಿಂದ ರೈತರ ಹೊಲಗಳಿಗೆ ನೀರು ಹರಿಸುತ್ತಿಲ್ಲ.
ಭೀಕರ ಬರ ಪರಿಸ್ಥಿತಿ ಇದ್ದಾಗಲೂ ಕೊಪ್ಪಳ, ವಿಜಯನಗರ, ಬಳ್ಳಾರಿ ಜಿಲ್ಲೆಯ ಸ್ಟೀಲ್, ಸಿಮೆಂಟ್, ಡಾಂಬರ್, ಕ್ರಿಮಿನಾಶಕ, ಕೆಮಿಕಲ್, ಆಸಿಡ್, ಗೊಬ್ಬರ ತಯಾರಿಸುವ ಕಾರ್ಖಾನೆಗಳಿಗೆ ನೀರು ನಿರಂತರವಾಗಿ ಹರಿಯುತ್ತಿದೆ. ಜಲಾಶಯದಲ್ಲಿ ದೇಹದಲ್ಲಿನ ನರಗಳ ರೀತಿಯಲ್ಲಿ ಪೈಪ್ ಲೈನ್ ಹಾಕಿ ದಿನದ 24 ತಾಸು ನೀರೆತ್ತಲಾಗುತ್ತಿದೆ. ರೈತರು ಬಾಯಿ ಬಡಿದುಕೊಂಡರೂ ನೀರು ಹೊಲಗಳಿಗೆ ಹರಿಸುತ್ತಿಲ್ಲ. ಕುಡಿಯುವ ನೀರಿಗೂ ತತ್ವಾರವಾಗುವ ಸಂಭವವಿದ್ದು ಸರ್ಕಾರ ಮುಂಜಾಗ್ರತೆ ವಹಿಸಿ ಕುಡಿಯಲು ನೀರು ಮೀಸಲಿರಿಸಬೇಕು ಎನ್ನುವ ಆದೇಶವನ್ನು ತುಂಗಭದ್ರಾ ಜಲಾಶಯದ ಅಧಿಕಾರಿಗಳು ಪಾಲಿಸುತ್ತಿಲ್ಲ. ಯೋಜನೆಯ ಆಶಯದಂತೆ ಮೊದಲು ಕೃಷಿ ಮತ್ತು ಕುಡಿಯುವ ನೀರಿನ ಲಭ್ಯತೆ ಮಾಡಿಕೊಂಡು ಆನಂತರವಷ್ಟೇ ಕಾರ್ಖಾನೆಗೆ ಹರಿಸಬೇಕು. ಆದರೆ ಇದು ತಲೆಕೆಳಗಾಗಿದೆ. ತಕ್ಷಣದಿಂದಲೆ ಕಾರ್ಖಾನೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ಅನಿವಾರ್ಯವಾಗಿ ರೈತರೇ ಜಲಾಶಯಕ್ಕಿಳಿದು ನೀರೆತ್ತುವ ಯಂತ್ರ ಮತ್ತು ಪೈಪ್ ಲೈನ್ ಕಿತ್ತಾಕಲು ಮುಂದಾಗಬೇಕೆಂದು ಕರೆ ನೀಡಿದರು.
ಧರಣಿಯಲ್ಲಿ ನಿವೃತ್ತ ಪ್ರಾಚಾರ್ಯ ಬಿ. ಜಿ.ಕರಿಗಾರ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ರಾಜಶೇಖರ ಏಳುಭಾವಿ, ಪ್ರಕಾಶಕ ಡಿ.ಎಂ.ಬಡಿಗೇರ, ರವಿ ಕಾಂತನವರ, ಶಂಭುಲಿಂಗಪ್ಪ ಹರಗೇರಿ, ಸಿಂಧನೂರು ದ.ಸಂ.ಸ ಮುಖಂಡ ಮಂಜುನಾಥ ಗಾಂಧಿನಗರ, ಧರ್ಮರಾಜ ಗೋನಾಳ, ಮಲ್ಲಪ್ಪ ಮಾದಿನೂರು, ಗಾಳೆಪ್ಪ ಇಂದರಗಿ, ರಮೇಶ ಕಾಮನೂರು, ಅಭಿಜಿತ್ ಅಂಡಗಿ, ಶಿವಪ್ಪ ಜಲ್ಲಿ, ಗಂಗಮ್ಮ ಕುರುಗೋಡು ಮುಂತಾದವರು ಇದ್ದರು.