*ಬಳ್ಳಾರಿ:29: ಸಾಂಸ್ಕೃತಿಕ ನಗರಿ ಬಳ್ಳಾರಿಯ ಹೆಮ್ಮೆ *ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರ* ಇಂದು ಅವನತಿಯ ಅಂಚಿನಲ್ಲಿದೆ. ಕಲಾವಿದರ ಕನಸಿನ ವೇದಿಕೆ ಈಗ ಅವರಿಗೆ "ಸಾವಿನ ಬಲೆ"ಯಾಗಿದೆ.
1996ರಲ್ಲಿ ನಿರ್ಮಾಣವಾದ ಈ ವೇದಿಕೆ ಕಳೆದ 30 ವರ್ಷದಿಂದ ಒಂದೇ ಒಂದು ಬಾರಿ ಕೂಡ ಸರಿಯಾದ ದುರಸ್ತಿ ಕಾಣಲಿಲ್ಲ. ಮರದ ಹಲಗೆಗಳು ತೇವದಿಂದ ಸಂಪೂರ್ಣ ಕೊಳೆತು, ಇಲಿಗಳಿಂದ ಕೊರೆಯಲ್ಪಟ್ಟು, ಹಲವೆಡೆ ಗುಂಡಿಗಳಾಗಿವೆ. ವೇದಿಕೆಯ ಹಿಂಭಾಗದ 50% ಭಾಗ ಸಂಪೂರ್ಣ ನಿಷ್ಪ್ರಯೋಜಕವಾಗಿದೆ.
*ಅತ್ಯಂತ ಆತಂಕದ ವಿಚಾರ:* ವೇದಿಕೆಯ ಕೆಳಗೆ ಹೈವೋಲ್ಟೇಜ್ ವಿದ್ಯುತ್ ಕೇಬಲ್‌ಗಳ ಸೆಲ್ಲಾರ್ ಇದೆ. ಪ್ರದರ್ಶನದ ವೇಳೆ ಕಲಾವಿದನೊಬ್ಬನ ಕಾಲು ಹಲಗೆ ನಡುವೆ ಸಿಲುಕಿದರೆ ಜೀವವನ್ನೇ ಕಳೆದುಕೊಳ್ಳುವ ಅಪಾಯವಿದೆ. ಆದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.
"ನಾವು ಸರ್ಕಾರಿ ಸಂಬಳದ ಕಲಾವಿದರಲ್ಲ. ಹೊಟ್ಟೆಪಾಡಿಗಾಗಿ ಕೆಲಸ ಮಾಡಿಕೊಂಡು, ರಾತ್ರಿ ರಂಗಸೇವೆ ಮಾಡುತ್ತೇವೆ. ಆದರೆ ಈಗ ವೇದಿಕೆಯ ಮೇಲೆ ಕಾಲಿಡಲೂ ಭಯವಾಗುತ್ತಿದೆ. ನಮ್ಮ ಜೀವಕ್ಕೆ ಬೆಲೆ ಇಲ್ಲವೇ?" ಎಂದು ನೊಂದ ಕಲಾವಿದರು ಪ್ರಶ್ನಿಸುತ್ತಾರೆ.
ಬಳ್ಳಾರಿಯಿಂದ ರಾಷ್ಟ್ರಮಟ್ಟಕ್ಕೆ ಹೋದ ನೂರಾರು ಕಲಾವಿದರು ಈ ವೇದಿಕೆಯಿಂದಲೇ ಬೆಳೆದವರು. ಇಂತಹ ಐತಿಹಾಸಿಕ ರಂಗಮಂದಿರವನ್ನು ಉಳಿಸಿಕೊಳ್ಳುವುದು ಸರ್ಕಾರದ ಕರ್ತವ್ಯ.
ಆದ್ದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಕೂಡಲೇ 15 ದಿನದೊಳಗೆ ವೇದಿಕೆಯ ಸಂಪೂರ್ಣ ದುರಸ್ತಿ ಮಾಡುವಂತೆ ರಂಗಭೂಮಿ ಕಲಾವಿದರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.