ಬಳ್ಳಾರಿ, ಜು. 26: ಸಾಹಿತ್ಯ, ಕಲೆ ಹಾಗೂ ಸಂಗೀತದಂತಹ ಸಾಂಸ್ಕೃತಿಕ ಪ್ರಕಾರಗಳು ಮಾನವನ ಮನಸ್ಸಿಗೆ ನೆಮ್ಮದಿ ಮತ್ತು ಸಂತೋಷವನ್ನು ನೀಡುತ್ತವೆ ಎಂದು ಕರ್ನಾಟಕ ಗೃಹಮಂಡಳಿ ನಿವೃತ್ತ ಅಧಿಕಾರಿ ಶಿವರುದ್ರಯ್ಯ ಸ್ವಾಮಿ ಹೇಳಿದರು.
ನಗರದ ಪಾಂಡುರಂಗ ದೇವಾಲಯದ ಕಲ್ಯಾಣ ಮಂಟಪದಲ್ಲಿ ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಶನಿವಾರ ರಾತ್ರಿ ಆಯೋಜಿಸಿದ್ದ ತುಂಗಾ ಆಷಾಢ ನಾಟ್ಯ ನಮನ 2026 ಕಾರ್ಯಕ್ರಮವನ್ನು ತಬಲಾ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ದೇವಸ್ಥಾನದ ಟ್ರಸ್ಟಿ ವೆಂಕೋಬರಾವು ಮಾತನಾಡಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಮಾಜದ ಎಲ್ಲ ವರ್ಗದವರು ಪ್ರೋತ್ಸಾಹ ನೀಡಬೇಕು ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.
ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಜ ತಂಡದ ಸಮೂಹ ನೃತ್ಯ, ವಿದ್ಯಾ, ದಿಶಾ, ಶ್ರೀಲಕ್ಷ್ಮಿ ಹಾಗೂ ಸೌಜನ್ಯ ಅವರ ಸಂಗೀತ ಗಾಯನ, ರಾಧಾಕೃಷ್ಣರ ಏಕಪಾತ್ರಾಭಿನಯ ಸೇರಿದಂತೆ ವಿವಿಧ ಕಲಾ ಪ್ರದರ್ಶನಗಳು ಭಕ್ತರ ಮನಸೂರೆಗೊಂಡವು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರನ್ನು ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ರಂಗ ಕಲಾವಿದ ನಾಗರಾಜ್, ನಿವೃತ್ತ ಮುಖ್ಯೋಪಾಧ್ಯಾಯೆ ನಾಗಮಣಿ, ನೃತ್ಯಗುರು ಶ್ರೀಜಾ, ಕಲಾವಿದೆ ವಸುಂಧರ, ಪರಿಮಳ, ಸುರೇಂದ್ರ, ಶ್ರೀನಿವಾಸ್ ಸೇರಿದಂತೆ ಅನೇಕ ಕಲಾವಿದರು ಉಪಸ್ಥಿತರಿದ್ದರು.
ಪತ್ರಕರ್ತ ಹಾಗೂ ಕಲಾವಿದ ಟಿ. ನಾಗಭೂಷಣ್ ಕಾರ್ಯಕ್ರಮ ನಿರೂಪಿಸಿದರೆ, ರಾಘವೇಂದ್ರ ಆಚಾರ್ಯ ವಂದಿಸಿದರು.