ರಾಯಬಾಗ: ಇಂದಿನ ಒತ್ತಡದ ಯುಗದಲ್ಲಿ ಪ್ರತಿಯೊಬ್ಬರೂ ತಮ್ಮ ಕೆಲಸ ಕಾರ್ಯಗಳಿಗೆ ಹೆಚ್ಚು ಒತ್ತು ನೀಡಿ ಶರೀರದ ಕಡೆಗೆ ಹೆಚ್ಚು ಕಾಳಜಿ ವಹಿಸುತ್ತಿಲ್ಲವಾದ್ದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಅಭಾಜಿ ಫೌಂಡೇಶನ್ ಅಧ್ಯಕ್ಷ ಹಾಗೂ ಜಿ.ಪಂ.ಮಾಜಿ ಸದಸ್ಯ ಪ್ರಣಯ ಪಾಟೀಲ ಹೇಳಿದರು.
ಸೋಮವಾರ ತಾಲೂಕಿನ ಚಿಂಚಲಿ ಮಹಾಕಾಳಿ ಗಜಾನನ ಮಿತ್ರ ಮಂಡಳಿಯ ಸಹಭಾಗಿತ್ವದೊಂದಿಗೆ “ಸೈಕಲ್ ಸವಾರಿ ಆರೋಗ್ಯದ ರೂವಾರಿ” ಅಭಿಯಾನ ಸೈಕ್ಲೋಥಾನ್-೨೦೨೬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾವು ನಮ್ಮ ಜೀವನದಲ್ಲಿ ನಿರೋಗಿಗಳಾಗಿ ಬಾಳಬೇಕಾದರೆ ನಮ್ಮ ದೇಹವನ್ನು ದಂಡಿಸಬೇಕು. ಪ್ರತಿದಿನ ಸೈಕಲ್ ಮೇಲೆ ಕನಿಷ್ಟ ೧೦-೨೦ ಕಿಮಿ ದೂರ ಕ್ರಮಿಸಿ ಶರೀರವನ್ನು ಸದೃಢಗೊಳಿಸಬೇಕೆಂದರು.
ಸೈಕಲ್ ಅಭಿಯಾನವು ಚಿಂಚಲಿ ಪಟ್ಟಣದಿಂದ ಪ್ರಾರಂಭವಾಗಿ ಪಟ್ಟಣದ ಅಭಾಜಿ ವೃತ್ತಕ್ಕೆ ಆಗಮಿಸಿ, ರಾಯಬಾಗ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನಃ ಚಿಂಚಲಿ ಪಟ್ಟಣಕ್ಕೆ ಹಿಂದಿರುಗಿತು. ಅಭಿಯಾನದಲ್ಲಿ ಸೈಕಲ್ ಬಳಕೆ ಹಾಗೂ ಆರೋಗ್ಯ ಕುರಿತು ಘೋಷಣೆಗಳನ್ನು ಕೂಗುತ್ತ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ರಾಜು ಅಳಾಜ, ಸಂಜೀವ ಟೇಳೆ, ಹನಮಂತ ಠಕ್ಕನ್ನವರ ಸೈಕಲ್ ಜಾಗೃತಿ ಅಭಿಯಾನ ಕುರಿತು ಮಾಹಿತಿ ನೀಡಿದರು.
ಏಸು ಪಾಟೀಲ, ರಾಜು ಬನಗೆ, ಜಾಕೀರ ತರಡೆ ಸೇರಿ ಅನೇಕರು ಇದ್ದರು.
ಸೈಕ್ಲೋಥಾನ್-೨೦೨೬ ರ ಸೈಕಲ್ ಅಭಿಯಾನದಲ್ಲಿ ಚಿಂಚಲಿ, ಉಗಾರ, ರಾಯಬಾಗ, ಹಾರೂಗೇರಿ ಸೇರಿದಂತೆ ೫೦ ಕ್ಕೂ ಹೆಚ್ಚು ಸೈಕಲ್ ಪಟುಗಳು ಭಾಗವಹಿಸಿದ್ದರು.