LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕಾರ್ಮಿಕ‌ ಇಲಾಖೆಯ ದಿಟ್ಟ ಹೆಜ್ಜೆ: ಸಚಿವ ಸಂತೋಷ್‌ ಲಾಡ್‌








ಬೆಂಗಳೂರು:  ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತ ಅರಿವು ಮನೆಗಳಿಂದಲೇ ಆರಂಭವಾಗಬೇಕು. ಸಾರ್ವಜನಿಕರು ಈ ಬಗ್ಗೆ ಜಾಗೃತರಾಗಬೇಕು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಹೇಳಿದರು.


ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಕಾರ್ಮಿಕ ಇಲಾಖೆ ವತಿಯಿಂದ ಬೆಂಗಳೂರಿನ ಎಂ ಜಿ ರಸ್ತೆಯ ಮಹಾತ್ಮ ಗಾಂಧಿ ಉದ್ಯಾನದಿಂದ ಕೆ ಆರ್‌ ವೃತ್ತದವರೆಗೆ ಹಮ್ಮಿಕೊಂಡಿದ್ದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಬಾಲ ಕಾರ್ಮಿಕರಾಗುವುದನ್ನು ತಡೆಯಲು ಕಾರ್ಮಿಕ ಇಲಾಖೆ ಹಲವು ಕ್ರಮ ಕೈಗೊಂಡಿದೆ. ಸರ್ಕಾರದೊಂದಿಗೆ ಜನರೂ ಕೈ ಜೋಡಿಸಿದರೆ ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬಹುದು ಎಂದರು.


ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧ. ಯಾರೇ ಇದನ್ನು ಉಲ್ಲಂಘಿಸಿದರೆ ಆರು ತಿಂಗಳಿಂದ ಎರಡು ವರ್ಷದವರೆಗೆ ಶಿಕ್ಷೆ, ದಂಡ ವಿಧಿಸಲಾಗುತ್ತದೆ. ಪೋಷಕರಿಗೂ ಶಿಕ್ಷೆ ಆಗಲಿದೆ. ಇದರ ಮೂಲಕ ಭಯ ಮೂಡಿಸುವುದು ಇಲಾಖೆಯ ಉದ್ದೇಶವಲ್ಲ. ಬಾಲ ಕಾರ್ಮಿಕ ಪದ್ಧತಿ ಬಗ್ಗೆ ಸಾಮಾಜಿಕ ವ್ಯವಸ್ಥೆಯಡಿ ಅರಿವು ಮೂಡಿಸಬೇಕು ಎಂದು ವಿವರಿಸಿದರು.


ರಾಜ್ಯದ ೨೨ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಜಿಲ್ಲಾಧಿಕಾರಿ, ಎಸ್‌ ಪಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಸಭೆ ಮಾಡಿ ಮಕ್ಕಳು ಕಾರ್ಮಿಕರಾಗುವುದನ್ನು ತಡೆಯಲು ಕ್ರಮ ಕೈಗೊಂಡಿದ್ದೇವೆ. ಡಿಸಿ, ಸಿಇಒ, ಎಸ್ಪಿಗಳು ಮುತುವರ್ಜಿ ವಹಿಸಿದರೆ ನಿರ್ಮೂಲನೆ ಸುಲಭವಾಗಲಿದೆ.

ವರ್ಷಕ್ಕೆ ಒಂದು ಬಾರಿ ದಿನಾಚರಣೆ ಮಾಡಿದರೆ ಸಾಲದು. ಎರಡು ತಿಂಗಳಿಗೆ ಒಂದು ಬಾರಿ ಈ ಸಂಬಂಧ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಸೂಚನೆ ನೀಡಿದರು.


ಹೈವೆ ಬದಿಗಳಲ್ಲಿನ ಡಾಬಾ, ಹೋಟೆಲ್‌, ಗ್ಯಾರೇಜ್‌, ಸಣ್ಣ ಸಣ್ಣ ಮೆಕ್ಯಾನಿಕ್‌ ಶಾಪ್‌ಗಳಲ್ಲಿ ಮಕ್ಕಳು ಕೆಲಸ ಮಾಡುತ್ತಾರೆ. ಅವರು ಕೆಲಸ ಬಿಟ್ಟು ಶಾಲೆಗಳಿಗೆ ಹೋಗುವಂತಾಗಬೇಕು. ಬಾಲ ಕಾರ್ಮಿಕರನ್ನು ದುಡಿಮೆಗೆ ನೇಮಿಸಿಕೊಂಡಿದ್ದು ಯಾರದೇ ಗಮನಕ್ಕೆ ಬಂದರೆ ಕೂಡಲೇ ಸಹಾಯವಾಣಿ 1098 ಗೆ ಕರೆ ಮಾಡಿ ಮಾಹಿತಿ ನೀಡಿ. ಸರ್ಕಾರದೊಂದಿಗೆ ಕೈ ಜೋಡಿಸಿ ನಾವು ನೀವೆಲ್ಲ ಸೇರಿ ಈ ಪದ್ಧತಿಯನ್ನು ತೊಲಗಿಸೋಣ ಎಂದು ಕರೆ ನೀಡಿದರು.


ಸರ್ಕಾರೇತರ ಸಂಸ್ಥೆಗಳನ್ನು ಸೇರಿಸಿಕೊಂಡು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವ ಚಟುವಟಿಕೆ ಹೆಚ್ಚಿಸಬೇಕು. ಮಕ್ಕಳಿಗೆ ಕಲಿಕೆ ಮೊದಲಾಗಬೇಕು. ಕೆಲಸ ಅಲ್ಲ. ಆಟವಾಡುವ ವಯಸ್ಸಲ್ಲಿ ಮಕ್ಕಳು ಕೆಲಸ ಮಾಡಬಾರದು. ಈ ನಿಟ್ಟಿನಲ್ಲಿ ಎಲ್ಲ ಸಾರ್ವಜನಿಕರು ಸೇರಿ ಒಂದಾಗೋಣ. ನಾವು ನೀವು ಸೇರಿ ಒಳ್ಳೆ ಕೆಲಸ ಮಾಡೋಣ ಎಂದರು.


ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಖ್ಯಾತ ನಟಿ ಅದಿತಿ ಪ್ರಭುದೇವ ಅವರು ಮಾತನಾಡಿ," ಬಾಲ ಕಾರ್ಮಿಕರಾಗದಂತೆ ತಡೆಯುವುದು ನಮ್ಮೆಲ್ಲರ ಜವಾಬ್ದಾರಿ. ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ. ಬಡತನಕ್ಕೂ ಬಾಲಕಾರ್ಮಿಕ ಪದ್ಧತಿಗೂ ನಂಟಿದೆ ಎನ್ನಲಾಗುತ್ತದೆ. ಅದು ಹೌದು. ಆದರೆ ಅದನ್ನು ಹೋಗಲಾಡಿಸಬಹುದು ಎಂದರು.


ಮಕ್ಕಳನ್ನು ಓದಿಸಲಾಗದ ಪರಿಸ್ಥಿತಿಯಲ್ಲಿ ಎಷ್ಟೋ ಪೋಷಕರು ಇದ್ದಾರೆ. ಅಂತಹವರಿಗೊಂದು ನಾವು ಸಣ್ಣ ಸಹಾಯ ಮಾಡಿದರೆ ಎಷ್ಟೋ ಮಕ್ಕಳು ಬಾಲ ಕಾರ್ಮಿಕರಾಗುವುದು ತಪ್ಪಲಿದೆ. ಒಳ್ಳೆಯ ಶಿಕ್ಷಣ ಸಿಕ್ಕರೆ ಮಕ್ಕಳು ಉತ್ತಮ ಪ್ರಜೆ ಆಗುತ್ತಾರೆ. ನಮ್ಮ ಸುತ್ತಮುತ್ತ ಬಾಲ ಕಾರ್ಮಿಕರು ಕಂಡು ಬಂದರೆ ನಮ್ಮ ಜವಾಬ್ದಾರಿ ನಿರ್ವಹಿಸೋಣ ಎಂದರು.


ಇದೇ ವೇಳೆ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರಮಾಣ ಸ್ವೀಕರಿಸಲಾಯಿತು.


ಜಾಥಾದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಶ್ರೀ ಜಿ ಜಗದೀಶ, ಕಾರ್ಮಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಎನ್‌ ವಿ ಪ್ರಸಾದ್‌, ಕಾರ್ಮಿಕ ಆಯುಕ್ತರಾದ ಡಾ. ಎಚ್‌ ಎನ್‌ ಗೋಪಾಲಕೃಷ್ಣ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳಾದ ಭಾರತಿ ಡಿ, ಜಂಟಿ ಕಾರ್ಮಿಕ ಆಯುಕ್ತರಾದ ರವಿಕುಮಾರ್‌, ಕಾರ್ಮಿಕ ಇಲಾಖೆಯ ಇತರ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲಾ ಮಕ್ಕಳು ಭಾಗವಹಿಸಿದ್ದರು.





























Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್