LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಬಜೆಟ್‌ ಘೋಷಣೆಗಳು ಜಾರಿಯಾಗದಿದ್ದರೇ ಕಾರ್ಯದರ್ಶಿಗಳೇ ಜವಾಬ್ದಾರರು

ಬೆಂಗಳೂರು:

ಬಜೆಟ್‌ನಲ್ಲಿ ಮಾಡಿರುವ ಘೋಷಣೆಗಳನ್ನು ಜಾರಿಗೊಳಿಸುವ ಕಾರ್ಯ ಅಧಿಕಾರಿಗಳದ್ದು. ಕಳೆದ ವರ್ಷದ ಬಜೆಟ್‌ನಲ್ಲಿ 15 ಘೋಷಣೆಗಳ ಜಾರಿ ಇನ್ನೂ ಆಗಿಲ್ಲ. ಇದಕ್ಕೆ ಯಾರು ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ವಿಧಾನಸೌಧದ ಸಭಾಂಗಣದಲ್ಲಿ ಶನಿವಾರ ನಡೆಸಿದ ಎಲ್ಲ ಇಲಾಖೆಗಳ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, 2026-27ನೇ ಬಜೆಟ್‌ನಲ್ಲಿನ ಘೋಷಣೆಗಳ ಪೈಕಿ ಕೇವಲ 5 ಘೋಷಣೆಗಳ ಬಗ್ಗೆ ಮಾತ್ರ ಸರ್ಕಾರಿ ಆದೇಶ ಮಾಡಲಾಗಿದೆ. ಮೇ ತಿಂಗಳ ಒಳಗಾಗಿ ಎಲ್ಲ ಸರ್ಕಾರಿ ಆದೇಶಗಳನ್ನು ಜಾರಿಗೊಳಿಸಿ, ಅನುಷ್ಠಾನ ಕಾರ್ಯ ಆರಂಭಿಸಬೇಕು. ಇಲ್ಲದಿದ್ದರೇ ಆಯಾ ಕಾರ್ಯದರ್ಶಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಖಡಕ್‌ ಎಚ್ಚರಿಕೆ ನೀಡಿದರು.

ಈ ವರ್ಷದ ಬಜೆಟ್‌ನಲ್ಲಿ 218 ಹೊಸ ಘೋಷಣೆಗಳು ಸೇರಿದಂತೆ ಒಟ್ಟಾರೆ 565 ಘೋಷಣೆಗಳನ್ನು ಮಾಡಿದ್ದೇವೆ. ಬಜೆಟ್‌ನ ಎಲ್ಲ ಘೋಷಣೆಗಳನ್ನು ಅದೇ ವರ್ಷ ಜಾರಿಗೊಳಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಬಜೆಟ್ ಘೋಷಣೆಗಳು ಯಾವುದೇ ಕಾರಣಕ್ಕೂ ಅನುಷ್ಠಾನಗೊಳ್ಳದೇ ಇರಬಾರದು. ಅನುಷ್ಠಾನದಲ್ಲಿನ ಪ್ರಾಯೋಗಿಕ ತೊಡಕುಗಳನ್ನು ನೇರವಾಗಿ ನನ್ನ ಅಥವಾ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರಬೇಕು ಎಂದು ನಿರ್ದೇಶನ ನೀಡಿದರು.

ಸಕಾಲ ಅರ್ಜಿಗಳನ್ನು ಸಕಾಲದಲ್ಲಿಯೇ ವಿಲೇವಾರಿ ಮಾಡಿ:

ಅಧಿಕಾರಕ್ಕೆ ಬಂದ ಬಳಿಕ ರಾಜ್ಯಮಟ್ಟದಲ್ಲಿ 2 ಜನಸ್ಪಂದನ ಸಭೆಯಲ್ಲಿ ಸ್ವೀಕರಿಸಲಾಗಿದ್ದ 15,334 ಸ್ವೀಕೃತಿಗಳ ಪೈಕಿ 15,295 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿಯಿರುವ 45 ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಸಾರ್ವಜನಿಕ ಕುಂದು-ಕೊರತೆ (IPGRS)ಯಡಿ 3,27,052 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 3,17,576 ವಿಲೇವಾರಿ ಮಾಡಲಾಗಿದೆ. 1,828 ಅರ್ಜಿಗಳ ವಿಲೇವಾರಿ ನಿಗದಿತ ಕಾಲಾವಧಿ ಮುಗಿದಿದೆ. ಸಾರ್ವಜನಿಕರ ಕುಂದು-ಕೊರತೆಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡದಿದ್ದರೇ ಜನರಿಗೆ ಸರ್ಕಾರದ ಮೇಲಿನ ನಂಬಿಕೆಯೇ ಹೊರಟು ಹೋಗುತ್ತದೆ. ಇದಕ್ಕೆ ಅವಕಾಶ ಮಾಡಬಾರದು. ಇದೇ ರೀತಿ ಸಕಾಲ ಅಡಿ ಸ್ವೀಕರಿಸಲಾಗುವ ಅರ್ಜಿಗಳನ್ನು ಸಹ ಸಕಾಲದಲ್ಲಿಯೇ ವಿಲೇವಾರಿ ಮಾಡಬೇಕು ಎಂದು ತಾಕೀತು ಮಾಡಿದರು.

24,300 ಹುದ್ದೆಗಳ ಭರ್ತಿಗೆ ಮಂಜೂರಾತಿ:

ಭರ್ತಿ ಮಾಡಿಕೊಳ್ಳಲು ಮಂಜೂರಾತಿ ನೀಡಲಾಗಿರುವ ಹುದ್ದೆಗಳ ಭರ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಆರ್ಥಿಕ ಇಲಾಖೆಯಿಂದ 24,300 ಹುದ್ದೆಗಳ ಭರ್ತಿಗೆ ಮಂಜೂರಾತಿ ನೀಡಲಾಗಿದೆ. ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ ವೃಂದದಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗದೇ ಬಾಕಿಯಿರುವ 32,132 ಹುದ್ದೆಗಳಿವೆ. ಕೆಲವು ಇಲಾಖೆಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಾವಳಿ ಪರಿಷ್ಕರಣೆ ಬಾಕಿಯಿದ್ದು, ಇದನ್ನು ಆದಷ್ಟು ಬೇಗನೆ ಮುಗಿಸಬೇಕು ಎಂದು ಸೂಚಿಸಿದರು.

ಕೇಂದ್ರದಿಂದ ₹11,367 ಕೋಟಿ ಅನುದಾನ ಬಿಡುಗಡೆಗೆ ಬಾಕಿ:

ವಿವಿಧ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಡಿಯಲ್ಲಿ 2025-26ನೇ ಸಾಲಿನಲ್ಲಿ ರಾಜ್ಯ ಸರ್ಕಾರ ತನ್ನ ಪಾಲಿನ ₹22,768 ಕೋಟಿ ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರ ₹16,729 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರದಿಂದ ₹11,367 ಕೋಟಿ ಅನುದಾನ ಬಿಡುಗಡೆಗೆ ಬಾಕಿಯಿದೆ. ಈ ಅವಧಿಯಲ್ಲಿ ಒಟ್ಟಾರೆ ₹42,222 ಕೋಟಿ ಲಭ್ಯ ಅನುದಾನವಿದ್ದು, ₹38,236 ಕೋಟಿ ವೆಚ್ಚ ಮಾಡಲಾಗಿದೆ. ಅನುದಾನವನ್ನು ನಿಗದಿತ ಅವಧಿಯೊಳಗಾಗಿ ಖರ್ಚು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. 

ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ₹2 ಕೋಟಿವರೆಗೆ ಮೀಸಲಾತಿ ಕಲ್ಪಿಸಲಾಗಿದೆ. ವಿವಿಧ ಕಾಮಗಾರಿಗಳನ್ನು ಒಟ್ಟು ಸೇರಿಸಿ ಪ್ಯಾಕೇಜ್ ಮಾಡುವ ಮೂಲಕ ಮೀಸಲಾತಿ ತಪ್ಪಿಸಲು ಅವಕಾಶ ನೀಡಬಾರದು. ಎಲ್ಲ ಕಾಮಗಾರಿಗಳನ್ನು ನಿಗದಿತ ಅವಧಿಯಯೊಳಗಾಗಿ ಪೂರ್ಣಗೊಳಿಸಬೇಕು. ಕಾಮಗಾರಿ ವಿಳಂಬದಿಂದ ನಿರ್ಮಾಣ ವೆಚ್ಚ ಹೆಚ್ಚಳಕ್ಕೆ ಅವಕಾಶ ಮಾಡಬಾರದು ಎಂದರು.

  • ಈ ವರ್ಷ ಮಳೆ ಶೇ.5ರಷ್ಟು ಮಳೆ ಕಡಿಮೆಯಾಗುವ ಸಾಧ್ಯತೆಯಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ವ್ಯಾಪ್ತಿಯ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಪರಿಸ್ಥಿತಿ ಬಗ್ಗೆ ನಿರಂತರ ನಿಗಾ ವಹಿಸಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ಸಭೆ ನಡೆಸಬೇಕು. ತಮ್ಮ ಉಸ್ತುವಾರಿಯಲ್ಲಿನ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುವುದು ಆಯಾ ಕಾರ್ಯದರ್ಶಿಗಳ ಜವಾಬ್ದಾರಿಯಾಗಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗಬಾರದು.
                                                                     -ಸಿದ್ದರಾಮಯ್ಯ, ಮುಖ್ಯಮಂತ್ರಿ.

ರಾಜಕಾರಣಿಗಳ ಓಲೈಕೆಯಿಂದ ಸರ್ವಾಧಿಕಾರಕ್ಕೆ ಹಾದಿ:

ಸಿಎಂಅಧಿಕಾರಿಗಳು ರಾಜಕಾರಣಿಗಳ ಓಲೈಕೆ ಮಾಡಲು ಹೋಗಬಾರದು, ಇದು ಸರ್ವಾಧಿಕಾರಕ್ಕೆ ಹಾದಿ ಮಾಡುತ್ತದೆಂದು ಅಂಬೇಡ್ಕರ್ ಎಚ್ಚರಿಕೆ ನೀಡಿದ್ದರು. ಅದರಂತೆ ನೀವು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಿ, ಸಚಿವರಿಗೆ ಕಾನೂನಿನ ವ್ಯಾಪ್ತಿಯೊಳಗೆ ಸಲಹೆಗಳನ್ನು ನೀಡಿ. ಸರ್ಕಾರಕ್ಕೆ ಒಳ್ಳೆಯ ಹೆಸರು ತರುವುದು ಕಾರ್ಯದರ್ಶಿಗಳ ಕಾರ್ಯಚಟುವಟಿಕೆಗಳ ಮೇಲೆ ಅವಲಂಬಿತವಾಗಿದೆ. ಆಡಳಿತಕ್ಕೆ ಇನ್ನಷ್ಟು ಚುರುಕು ಮೂಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದರು.

news_1777733710_0_946.webp

ಅಧಿಕಾರಿಗಳು ಯಾವತ್ತೂ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಬಾರದು ಹಾಗೂ ತಪ್ಪು ಹಾದಿಗೆ ಎಳೆಯಬಾರದು. ನಮ್ಮ ನಿಲುವುಗಳು, ತೀರ್ಮಾನಗಳು ಯಾವತ್ತೂ ಜನಪರವಾಗಿರಬೇಕು. ಅಧಿಕಾರಿಗಳು 30-35 ವರ್ಷಗಳ ಕಾಲ ಆಡಳಿತ ವ್ಯವಸ್ಥೆಯಲ್ಲಿದ್ದರೇ ಜನಪ್ರತಿನಿಧಿಗಳು ಕೇವಲ 5 ವರ್ಷಗಳ ಕಾಲ ಮಾತ್ರ ಇರುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿದೆ ಎಂದು ತಿಳಿಸಿದರು.

ರಾಜ್ಯದ ಆಡಳಿತ ಸಮರ್ಪಕವಾಗಿ ನಡೆಯಲು ಇಲಾಖೆ ಕಾರ್ಯದರ್ಶಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇದನ್ನು ಸಂವಿಧಾನದಲ್ಲಿಯೇ ಉಲ್ಲೇಖಿಸಲಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು 1949 ನವೆಂಬರ್ 25 ರಂದು ಮಾಡಿದ ಭಾಷಣದಲ್ಲಿ ರಾಜಕೀಯ ಪ್ರಜಾಪ್ರಭುತ್ವವು ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯ ತಳಹದಿಯ ಮೇಲೆ ನಿಂತಿದೆ ಎಂದು ಹೇಳಿದ್ದರು. ಅಂದರೆ ದೇಶದ ಪ್ರತಿಯೊಬ್ಬರಿಗೂ ಆರ್ಥಿಕ ಹಾಗೂ ಸಾಮಾಜಿಕವಾಗಿ ಶಕ್ತಿ ತುಂಬುವ ಕಾರ್ಯ ಮಾಡಿದರೇ ಮಾತ್ರ ನಿಜವಾದ ರಾಜಕೀಯ ಸ್ವಾತಂತ್ರ್ಯ ಸಾಕಾರಗೊಳ್ಳಲು ಸಾಧ್ಯ. ಸಂವಿಧಾನದ ಆಶಯಗಳ ಪ್ರಕಾರ ಕಾರ್ಯ ನಿರ್ವಹಿಸಬೇಕಾದುದು ಎಲ್ಲ ಕಾರ್ಯದರ್ಶಿಗಳ ಕರ್ತವ್ಯವಾಗಿದೆ. ಸಂವಿಧಾನಕ್ಕೆ ವಿರುದ್ಧವಾದ ಯಾವುದೇ ಕಾರ್ಯವನ್ನು ಮಾಡಬಾರದು ಎಂದು ಖಡಕ್‌ ಸಂದೇಶ ಸಾರಿದರು.

ಗೃಹ ಸಚಿವರಾಗಿದ್ದ ವಲ್ಲಭಬಾಯ್ ಪಟೇಲ್ ಅವರು ಕಾರ್ಯದರ್ಶಿಗಳು ನಿರ್ಭಯವಾಗಿ ಸ್ವತಂತ್ರವಾಗಿ ತಮ್ಮ ಅಭಿಪ್ರಾಯಗಳನ್ನು ಮಂತ್ರಿಗಳಿಗೆ ತಿಳಿಸಬೇಕು. ಮಂತ್ರಿ ಅಸಮಾಧಾನಗೊಳ್ಳುತ್ತಾರೆಂದು ಸತ್ಯ ಹೇಳುವುದರಿಂದ ಹಿಂಜರಿಯಬಾರದು ಎಂದು ಸಂವಿಧಾನ ಸಭೆಯಲ್ಲಿ ಹೇಳಿದ್ದರು. ಇದರಂತೆ ಹಿರಿಯ ಅಧಿಕಾರಿಗಳು ನಿಮ್ಮ ಅಭಿಪ್ರಾಯಗಳನ್ನು ನಿರ್ಭಯವಾಗಿ, ಸ್ವತಂತ್ರವಾಗಿ, ಸತ್ಯವಾಗಿ ಹೇಳಬೇಕು ಎಂದು ಸಲಹೆ ನೀಡಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್