LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
State News

ಮೇಕೆದಾಟು ಯೋಜನೆಗೆ ಶೀಘ್ರದಲ್ಲೇ ಹೊಸ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ.ಶಿವಕುಮಾರ್

ಚಾಮರಾಜನಗರ: 

ಮೇಕೆದಾಟು ಯೋಜನೆಗೆ ಹೊಸ ಡಿಪಿಆರ್ ಸಿದ್ಧಪಡಿಸಲಾಗಿದ್ದು, ಈ ಯೋಜನೆಯ ಕಚೇರಿ ಆರಂಭಿಸಿದ್ದೇವೆ. ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯ ಜಮೀನು ನೀಡಲು ಜಮೀನು ಗುರುತಿಸುತ್ತಿದ್ದೇವೆ. ಶೀಘ್ರವೇ ಕೇಂದ್ರಕ್ಕೆ ಡಿಪಿಆರ್ ಸಲ್ಲಿಕೆ ಮಾಡಲಿದ್ದು, ಕೇಂದ್ರ ಸರ್ಕಾರದ ಅನುಮತಿ ಬಂದ ಬಳಿಕ ಯೋಜನೆಯ ಭೂಮಿ ಪೂಜೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕೊಳ್ಳೇಗಾಲ ತಾಲೂಕಿನ ಮಧ್ಯರಂಗ ದೇಗುಲದ ಬಳಿ ಗುರುವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ತಮಿಳುನಾಡಿಗೆ 177 ಟಿಎಂಸಿ ನೀರು ಬಿಡಲೇಬೇಕು ಎಂದು ಸ್ಪಷ್ಟ ಆದೇಶ ನೀಡಲಾಗಿದೆ. ಇದನ್ನು ಹೇಗೆ ಬಗೆಹರಿಸಬೇಕು ಎಂದು ಮುಂದಿನ ದಿನಗಳಲ್ಲಿ ಚರ್ಚೆ ಮಾಡುತ್ತೇನೆ. ಮೇಕೆದಾಟು ಯೋಜನೆಗೆ ಆಕ್ಷೇಪ ಸಲ್ಲಿಸಲು ತಮಿಳುನಾಡಿಗೆ ಯಾವುದೇ ರೀತಿಯ ಹಕ್ಕಿಲ್ಲ, ಇದರ ಬಗ್ಗೆ ಕೇಂದ್ರ ಜಲ ಆಯೋಗ ತೀರ್ಮಾನ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ ಎಂದರು.

ಜನರ ಋಣ ತೀರಿಸುತ್ತಿದ್ದೇವೆ; 

ಅಧಿಕಾರದಲ್ಲಿರುವುದಕ್ಕಿಂತ ಅಧಿಕಾರದಲ್ಲಿದ್ದಾಗ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ನಮ್ಮ ಸರ್ಕಾರಕ್ಕೆ ಮೂರು ವರ್ಷ ಪೂರ್ಣಗೊಂಡಿದೆ. ಕೊಟ್ಟ ಮಾತಿನಂತೆ ನಡೆದಿದ್ದೇವೆ. ಜೊತೆಗೆ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಯೋಜನೆ ನೀಡಿದ್ದೇವೆ. ಪ್ರತಿಯೊಬ್ಬ ಫಲಾನುಭವಿಗಳ ಆಸ್ತಿ ದಾಖಲೆಗಳಲ್ಲಿ ಅವರ ಫೋಟೋ, ಆಸ್ತಿಯ ಫೋಟೋ ಹಾಕಿ ಮನೆ ಮನೆಗೆ ಖಾತೆ ಒದಗಿಸಿಕೊಡುತ್ತಿದ್ದೇವೆ. ಬೇರೆಯವರು ಮಾಡಲಾಗದ ಕೆಲಸವನ್ನು ನಾವು ಮಾಡಿ ಜನರ ಋಣ ತೀರಿಸುತ್ತಿದ್ದೇವೆ. ಮುಂದಿನ 2 ವರ್ಷಗಳಲ್ಲಿ ಇನ್ನು ಹೆಚ್ಚಿನ ಕೆಲಸ ಮಾಡುತ್ತಿದ್ದೇವೆ. ಕಳೆದ ಎರಡು ವರ್ಷ ಉತ್ತಮ ಮಳೆಯಾಗಿತ್ತು. ಈ ವರ್ಷ ಮಳೆ ಕೊರತೆಯಾದರೆ ರೈತರನ್ನು ಹೇಗೆ ಕಾಪಾಡಬೇಕು, ಕುಡಿಯುವ ನೀರಿನ ಸಮಸ್ಯೆ ಹೇಗೆ ಬಗೆಹರಿಸಬೇಕು ಎಂದು ಚರ್ಚೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ನಮ್ಮ ಸರ್ಕಾರ ಹಾಗೂ ಖಾಸಗಿಯವರು ಸೇರಿ ಮಧ್ಯರಂಗ ದೇವಾಲಯದ ಜೀರ್ಣೋದ್ಧಾರದ ಕೆಲಸ ಮಾಡುತ್ತಿದ್ದೇವೆ. ಇಂದು ಸಚಿವ ಸಂಪುಟ ಸಭೆ ಇದ್ದರೂ ನಾನು ಸೇರಿದಂತೆ ಅನೇಕ ಸಚಿವರು ಈ ಕಾರ್ಯಕ್ರಮಕ್ಕೆ ಬಂದಿದ್ದೇವೆ. ಭಕ್ತ ಹಾಗೂ ಭಗವಂತನ ನಡುವೆ ವ್ಯವಹಾರ ನಡೆಯುವ ಸ್ಥಳ ದೇವಾಲಯ. ಈ ಪುಣ್ಯಕ್ಷೇತ್ರ ಯಾತ್ರಿಕರಿಗೆ ಪ್ರಸಿದ್ಧವಾಗಿದೆ. ಇದು ಪ್ರಕೃತಿಯ ಕೊಡುಗೆ. ನಮ್ಮ ಸರ್ಕಾರ ಕೂಡ ಎಲ್ಲೆಡೆ ಅನೇಕ ಅಭಿವೃದ್ಧಿ ಕೆಲಸ ಮಾಡಿಕೊಂಡು ಬಂದಿದೆ. ಇಲ್ಲಿ ಸಚಿವ ಸಂಪುಟ ಸಭೆ ಮಾಡಿ ಈ ಭಾಗದ ಅಭಿವೃದ್ಧಿಗೆ ಅನೇಕ ಕ್ರಮ ಕೈಗೊಳ್ಳಲಾಗಿದೆ. ಕೈಗಾರಿಕಾ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಇದು ಇತಿಹಾಸ ಪುಟಕ್ಕೆ ಹೋಗುವ ಕೆಲಸವನ್ನು ನಮ್ಮ ಸಚಿವರಾದ ವೆಂಕಟೇಶ್ ಅವರು ಮಾಡಿದ್ದಾರೆ ಎಂದು ಹೇಳಿದರು.

ಜಿಬಿಎ ಚುನಾವಣೆಗೆ ಸಿದ್ಧತೆ: 

ಜಿಬಿಎ ಚುನಾವಣೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಮಾತನಾಡಿ, ಜಿಬಿಎ ಚುನಾವಣೆ ನಡೆಸುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆ. ಚುನಾವಣೆ ನಡೆಸಲು ಸರ್ಕಾರ ಸಂಪೂರ್ಣವಾಗಿ ಸಹಕಾರ ನೀಡಲು ಸಿದ್ಧವಾಗಿದೆ. ಸಮಯದ ಪ್ರಕಾರ ಚುನಾವಣೆ ನಡೆಯಲಿದೆ. ನಾವೆಲ್ಲ ಸಿದ್ಧತೆಯನ್ನು ಮಾಡಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ದಾರಿ ತೋರಿಸುವುದು ದೇವರ ಕೆಲಸ, ಗುರಿ ತಲುಪುವುದು ನಮ್ಮ ಕೆಲಸ: 

ಇನ್ನೊಂದೆಡೆ, ಕೊಳ್ಳೇಗಾಲ ತಾಲೂಕಿನ ಶ್ರೀ ಜಗನ್​ಮೋಹನ ರಂಗನಾಥಸ್ವಾಮಿ ದೇವಾಲಯ ಜೀರ್ಣೋದ್ಧಾರ ಪೂರಕ ಅಷ್ಟಬಂಧನ ದಿವ್ಯ ಮಹಾ ಕುಂಭಾಭಿಷೇಕ-ಸಂಪ್ರೋಕ್ಷಣ ಮಹೋತ್ಸವದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ದೇವರು ಕಷ್ಟ ಕೊಡುತ್ತಾನೆ ಜೊತೆಗೆ ಅದನ್ನು ಎದುರಿಸುವ ಶಕ್ತಿಯನ್ನೂ ನೀಡುತ್ತಾನೆ. ದಾರಿ ತೋರಿಸುವುದು ದೇವರ ಕೆಲಸ, ಗುರಿ ತಲುಪಬೇಕಿರುವುದು ನಮ್ಮ ಕೆಲಸ. ದೇವರು ನೀಡುವ ಅವಕಾಶವನ್ನು ಬಳಸಿಕೊಳ್ಳಬೇಕು. ಅವಕಾಶ ಸಿಕ್ಕಾಗ ಕೈಯಿಂದ ದಾನ ಮಾಡಿ ಎಂದು ತಿಳಿಸಿದರು.

ಚಾಮರಾಜನಗರ ದೇವರ ನಾಡು; 

ಚಾಮರಾಜನಗರ ಹಿಂದುಳಿದ ಜಿಲ್ಲೆಯಲ್ಲ. ಇದು ದೇವರ ನಾಡು. ಚಾಮರಾಜೇಶ್ವರ, ಬಿಳಿಗಿರಿ ರಂಗನಾಥ, ಹಿಮವದ್ ಗೋಪಾಲಸ್ವಾಮಿ, ಮಲೆ ಮಹದೇಶ್ವರ, ಮಧ್ಯರಂಗ ಹೀಗೆ ದೇವಾಲಯಗಳ ಬೀಡಾಗಿದೆ. ಕಾವೇರಿ ನದಿಯ ತಟದಲ್ಲಿ ರಂಗನಾಥಸ್ವಾಮಿ ನೆಲೆಸಿ ಹರಸುತ್ತಿದ್ದಾನೆ. ಮನುಷ್ಯ ಎಷ್ಟೇ ದೊಡ್ಡವನಾದರೂ ಅವನ ಧರ್ಮ, ಆಚರಣೆಗಳನ್ನು ಬಿಡಲು ಆಗುವುದಿಲ್ಲ ಎಂದು ಹಿರಿಯರು ಮಾರ್ಗದರ್ಶನ ಮಾಡಿದ್ದಾರೆ. ದೇವರ ದೇವ ರಂಗನಾಥನ ಪಾದಗಳಿಗೆ ನನ್ನ ಕುಟುಂಬ ಹಾಗೂ ಎಲ್ಲಾ ಭಕ್ತಾಧಿಗಳ ಪರವಾಗಿ ಸಾಷ್ಟಾಂಗ ನಮಸ್ಕಾರ ಎಂದು ಹೇಳಿದರು.

ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯಾ ಪದುಮನಾಭನ ಪಾದ ಭಜನೆ ಪರಮಸುಖವಯ್ಯಾ. ಎಎಂಆರ್ ಗ್ರೂಪಿನ ಮಹೇಶ್ ರೆಡ್ಡಿ ಅವರು ಹಾಗೂ ಕುಟುಂಬ ದೇವಾಲಯದ ಜೀರ್ಣೋದ್ಧಾರ ಮಾಡಿದ್ದಾರೆ. ಲಕ್ಷ್ಮೀ ರಂಗನಾಥಸ್ವಾಮಿಯ ಸೇವೆ ಮಾಡುವ ಭಾಗ್ಯ ಇವರಿಗೆ ಸಿಕ್ಕಿದೆ. ಅವರಿಗೆ ಇನ್ನೂ ಹೆಚ್ಚಿನ ಶಕ್ತಿಯನ್ನು ದೇವರು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅರ್ಚಕಸ್ಯ ಪ್ರಭಾವೇನ ಶಿಲಾಭವತಿ ಶಂಕರಃ ಅಂದರೆ ಅರ್ಚಕರ ಪ್ರಭಾವದಿಂದ ಶಿಲೆಯಲ್ಲೂ ಶಿವನನ್ನು ಕಾಣಬಹುದು. ದೇವರು, ದೇವಸ್ಥಾನ ಎಲ್ಲರ ಆಸ್ತಿ ಎಂದು ಡಿಕೆಶಿ ತಿಳಿಸಿದರು.

ಸಚಿವರಾದ ರಾಮಲಿಂಗಾರೆಡ್ಡಿ,‌ ಕೆ.ವೆಂಕಟೇಶ್,‌ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಎಂ.ಆರ್.ಮಂಜುನಾಥ್ ಹಾಗೂ ಡಿಕೆಶಿ ಪತ್ನಿ ಉಷಾ ಶಿವಕುಮಾರ್ ಇದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವನದಲ್ಲಿ ಶಿಸ್ತುಬದ್ಧ ಆರ್ಥಿಕತೆ ರೂಢಿಸಿಕೊಳ್ಳಿಬಾಕ್ಸಿಂಗ್‌ನಲ್ಲಿ 7, ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 1ಚಿನ್ನ - ಒಂದೇ ದಿನ ಒಟ್ಟು 8 ಚಿನ್ನದ ಪದಕ ಗೆದ್ದ ಭಾರತಹುಂಡಿ ಹಣ ದುರುಪಯೋಗಕ್ಕೆ ಬ್ರೇಕ್ : ದೇಗುಲಗಳ ಹೆಸರಲ್ಲೇ ಆಸ್ತಿ ಖರೀದಿ'ಸುರಕ್ಷಿತ ಪಾದಚಾರಿ ಮಾರ್ಗ’ದ ಗ್ಯಾರಂಟಿಗೆ ಕೈ ಜೋಡಿಸಿದೆ ಬೆಸ್ಕಾಂ: ಸಚಿವ ಕೆ.ಜೆ.ಜಾರ್ಜ್ಭವಿಷ್ಯಕ್ಕೆ ನುರಿತ ಇಂಜಿನಿಯರ್‌ಗಳ ರೂಪಿಸಲು  ಕ್ರೆಡಲ್‌ ಬದ್ಧ  : ಟಿ.ಡಿ. ರಾಜೇಗೌಡ ಸರ್ಕಾರಿ ಪ.ಪೂ.ಕಾಲೇಜಿನಲ್ಲಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಸಾಯಿ ಸಹಕಾರಿಗೆ ₹1.05 ಕೋಟಿ  ಲಾಭ : ಕವಟಗಿಮಠನ್ಯಾಯಸಮ್ಮತ ಆಹಾರ ವಿತರಣಾ ವ್ಯವಹಾರ ನೀತಿಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಸಂಘಟನೆಗಳಿಗೆ ಬೆಳಗಾವಿ ಆತಿಥ್ಯ ಉದ್ಯಮದ ಬೆಂಬಲ"ವ್ಯಸನಗಳಿಂದ ದೂರವಿದ್ದರೆ ಸಂಪದ್ಭರಿತ ಹಾಗೂ ಆರೋಗ್ಯವಂತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ"ಉತ್ತರ ಕರ್ನಾಟಕದ ಅಭಿವೃದ್ಧಿಯ ಶಿಲ್ಪಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ : ಜಗದೀಶ ಶೆಟ್ಟರ್