LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News | Districts Bellary

ವಚನ ಸಾಹಿತ್ಯವು ಮಾನವೀಯತೆಯ ಆಗರ: ಹೆಚ್.ಎಂ. ಮಲ್ಲಿಕಾರ್ಜುನ ಸ್ವಾಮಿ

ಬಳ್ಳಾರಿ, ಸೆ.21: ವಚನ ಸಾಹಿತ್ಯವು ಮಾನವೀಯತೆಯ ಆಗರವಾಗಿದ್ದು, ಸಮಾನತೆ, ಸಹಬಾಳ್ವೆ ಹಾಗೂ ಸಹಿಷ್ಣುತೆಯ ಮೌಲ್ಯಗಳನ್ನು ಸಾರುತ್ತದೆ. ಮನುಷ್ಯರನ್ನು ಜಾತಿ, ಧರ್ಮ, ವರ್ಗ ಸೇರಿದಂತೆ ಯಾವುದೇ ಹಣೆಪಟ್ಟಿಯಿಂದ ನೋಡದೆ ಮನುಷ್ಯರನ್ನಾಗಿಯೇ ಕಾಣಬೇಕು. ಮಾತುಗಳಿಗಿಂತ ಮಾನವೀಯ ಕಳಕಳಿ ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿದೆ ಎಂದು ನಿವೃತ್ತ ಉಪನಿರ್ದೇಶಕ ಹಾಗೂ ಲೇಖಕ ಹೆಚ್.ಎಂ. ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.
ನಗರದ ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಲಿಂ. ಡಾ. ವೈ. ನಾಗೇಶ ಶಾಸ್ತ್ರಿಗಳ ದತ್ತಿ ಹಾಗೂ ಲಿಂ. ಕೆ.ಎಂ. ಗವಿಸಿದ್ದಯ್ಯ–ಸರೋಜಮ್ಮ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾವಂತರು ಹೃದಯ ವೈಶಾಲ್ಯ ಬೆಳೆಸಿಕೊಳ್ಳಬೇಕು. ವ್ಯಕ್ತಿಯು ತನ್ನೊಳಗಿನ ಮನೋವಿಕಾರಗಳನ್ನು ತ್ಯಜಿಸಿ, ಆಚಾರಕ್ಕಿಂತ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡಬೇಕು. ಜೀವನ ಕ್ಷಣಿಕವಾದರೂ, ವ್ಯಕ್ತಿಯ ಸಾಧನೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆ ಶಾಶ್ವತವಾಗಿರುತ್ತದೆ. ಮತ್ತೊಬ್ಬರ ಹೃದಯದಲ್ಲಿ ಸ್ಥಾನ ಪಡೆಯುವಂತಹ ಕಾರ್ಯಗಳನ್ನು ಯುವ ತಲೆಮಾರು ಮಾಡಬೇಕು. ನೈತಿಕ ಮೌಲ್ಯಗಳನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾದ ಇಂದಿನ ಸಂದರ್ಭದಲ್ಲಿ ವಚನ ಸಾಹಿತ್ಯದ ಮನನವು ಸೂಕ್ತ ದಾರಿಯನ್ನು ತೋರಿಸುತ್ತದೆ ಎಂದರು.
ವಚನ ಸಾಹಿತ್ಯದಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆ’ ಕುರಿತು ವಿಶೇಷ ಉಪನ್ಯಾಸ ನೀಡಿದ ಇತಿಹಾಸ ಉಪನ್ಯಾಸಕ ರಫೀಕ್ ಶಿಡಗಿನಮೊಳ ಮಾತನಾಡಿ, ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆ, ಮತದಾನ ಅಥವಾ ಸರ್ಕಾರ ರಚನೆಯ ವ್ಯವಸ್ಥೆಯಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಗೌರವದಿಂದ ಬದುಕುವ ಹಕ್ಕು ನೀಡುವ ಜೀವನಮೌಲ್ಯವಾಗಿದೆ. ಸಮಾನತೆ, ಸ್ವಾತಂತ್ರ್ಯ, ನ್ಯಾಯ, ಸಹೋದರತೆ, ಜನರ ಪಾಲ್ಗೊಳ್ಳುವಿಕೆ ಹಾಗೂ ಮಾನವ ಘನತೆ ಪ್ರಜಾಪ್ರಭುತ್ವದ ಮೂಲತತ್ತ್ವಗಳಾಗಿವೆ ಎಂದು ಹೇಳಿದರು.
ವಚನ ಸಾಹಿತ್ಯವು ಕನ್ನಡದ ಹೆಮ್ಮೆಯ ಸಾಹಿತ್ಯ ಪರಂಪರೆಯಾಗಿದ್ದು, ಕೇವಲ ದೇವರು ಮತ್ತು ಭಕ್ತಿಯ ನಡುವಿನ ಸಂಬಂಧವನ್ನು ವಿವರಿಸುವುದಕ್ಕಷ್ಟೇ ಸೀಮಿತವಾಗಿರದೆ, ಮನುಷ್ಯ ಮತ್ತು ಸಮಾಜದ ನಡುವಿನ ಸಂಬಂಧವನ್ನು ಪ್ರಶ್ನಿಸಿದ ಸಾಹಿತ್ಯವಾಗಿದೆ. 12ನೇ ಶತಮಾನದ ವಚನ ಚಳವಳಿಯಲ್ಲಿ ಸಮಾನತೆ, ಮಾನವ ಘನತೆ ಹಾಗೂ ಸಾಮಾಜಿಕ ನ್ಯಾಯದಂತಹ ಹಲವು ಆಶಯಗಳು ವ್ಯಕ್ತವಾಗಿರುವುದನ್ನು ಕಾಣಬಹುದು ಎಂದರು.
ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ, ಸಿದ್ಧರಾಮ ಸೇರಿದಂತೆ ಅನೇಕ ವಚನಕಾರರು ತಮ್ಮ ವಚನಗಳ ಮೂಲಕ ಜಾತಿ, ಲಿಂಗ, ವೃತ್ತಿ ಹಾಗೂ ಸಾಮಾಜಿಕ ಅಸಮಾನತೆಗಳನ್ನು ಪ್ರಶ್ನಿಸಿದ್ದಾರೆ. ವಚನ ಸಾಹಿತ್ಯವು ಆಧುನಿಕ ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ನೇರ ಮಾದರಿಯಲ್ಲವಾದರೂ, ಅದರಲ್ಲಿರುವ ಹಲವು ಮೌಲ್ಯಗಳು ಇಂದಿನ ಪ್ರಜಾಪ್ರಭುತ್ವದ ಆಶಯಗಳೊಂದಿಗೆ ಸಾಮ್ಯತೆ ಹೊಂದಿವೆ ಎಂದು ವಿವರಿಸಿದರು.
ವಚನ ಚಳವಳಿಗೆ ಬಸವಣ್ಣ ಪ್ರಮುಖ ಪ್ರೇರಕ ಶಕ್ತಿಯಾಗಿದ್ದರು. ಶರಣರ ವಿಚಾರ ವಿನಿಮಯದ ಪ್ರಮುಖ ವೇದಿಕೆಯಾಗಿ ಅನುಭವ ಮಂಟಪವನ್ನು ಪರಿಗಣಿಸಲಾಗುತ್ತದೆ. ಸಮಾನತೆ, ಜಾತಿ ವಿರೋಧಿ ಚಿಂತನೆ, ಕಾಯಕ–ದಾಸೋಹ, ಸಾಮಾಜಿಕ ನ್ಯಾಯ, ವಿಚಾರ ಸ್ವಾತಂತ್ರ್ಯ ಹಾಗೂ ಪ್ರಶ್ನಿಸುವ ಮನೋಭಾವ ವಚನ ಸಾಹಿತ್ಯದ ಪ್ರಮುಖ ಆಶಯಗಳಾಗಿವೆ. ವಚನಕಾರರು ಕೇವಲ ಪರಂಪರೆಯನ್ನು ಅನುಸರಿಸುವ ಬದಲು ಅನುಭವ ಮತ್ತು ವಿಚಾರದ ಮೂಲಕ ಸತ್ಯವನ್ನು ಅರಿಯಲು ಪ್ರಯತ್ನಿಸಿದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತ್ಯಂ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಹೆಚ್. ವೀರಭದ್ರಪ್ಪ ವಹಿಸಿದ್ದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ. ವೈ. ನಾಗೇಶ ಶಾಸ್ತ್ರಿಗಳ ಮೊಮ್ಮಗಳು ಡಿ. ನಾಗರತ್ನ, ಉದ್ಯಮಿ ಎಂ. ಚಂದ್ರಮೌಳಿ, ಸಮಾಜ ಸೇವಕರಾದ ಹಲಕುಂದಿ ಸತೀಶ್ ಕುಮಾರ್ ಹಾಗೂ ಕೇಣಿ ಬಸವರಾಜ ಉಪಸ್ಥಿತರಿದ್ದರು.
ಪ್ರಾಧ್ಯಾಪಕ ಆಲಂಬಾಷಾ ಸ್ವಾಗತಿಸಿದರು. ಅಧ್ಯಾಪಕಿ ಮಂಗಳಗೌರಿ  ನಿರೂಪಿಸಿದರು. ಅಶ್ವಿನಿ ವಂದನಾರ್ಪಣೆ ಮಾಡಿದರು. ಗಣೇಶ್ ಡಿ.ಎಸ್. ಗೀತಗಾಯನ ನಡೆಸಿಕೊಟ್ಟರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST